ಬಸ್ ಸಂಚಾರ ಸ್ಥಗಿತ ಸಾಧ್ಯತೆ

«ಎನ್‌ಐಟಿಕೆ ಟೋಲ್‌ನಲ್ಲಿ ಬಸ್‌ಗಳಿಗೆ ಪರಿಷ್ಕೃತ ದರ ನೀಡಲು ತಾಕೀತು»

ವಿಜಯವಾಣಿ ಸುದ್ದಿಜಾಲ ಸುರತ್ಕಲ್
ಎನ್‌ಐಟಿಕೆ ಟೋಲ್‌ನಲ್ಲಿ ಕಿನ್ನಿಗೋಳಿ, ಉಡುಪಿ ಕಡೆಗೆ ಹೋಗುವ ಖಾಸಗಿ ಸರ್ವೀಸ್, ಎಕ್ಸ್‌ಪ್ರೆಸ್ ಬಸ್‌ಗಳಿಗೆ ಪರಿಷ್ಕೃತ ದರ ನೀಡಲು ಡಿ.10ರ ಗಡುವು ನೀಡಲಾಗಿದೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿದ್ದು, ಟೋಲ್ ದರ ಇಳಿಸದಿದ್ದಲ್ಲಿ ಬಸ್ ಸಂಚಾರ ಸ್ಥಗಿತಕ್ಕೆ ಬಸ್ ಮಾಲೀಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಿನ್ನಿಗೋಳಿ ವಲಯ ಬಸ್ ಮಾಲೀಕರ ಸಂಘ ಅಧ್ಯಕ್ಷ ದುರ್ಗಾಪ್ರಸಾದ್ ಶೆಟ್ಟಿ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಪರಿಷ್ಕೃತ ದರ ನೀಡದಿದ್ದಲ್ಲಿ ಡಿ.10ರಿಂದ ಬಸ್ ಸಂಚಾರ ನಿಲ್ಲಿಸಲು ಎನ್‌ಐಟಿಕೆ ಟೋಲ್‌ನ ಹೊಸ ಗುತ್ತಿಗೆದಾರರು ತಾಕೀತು ಮಾಡಿದ್ದಾರೆ. ಕಿನ್ನಿಗೋಳಿ ಕಡೆಗೆ ಸುರತ್ಕಲ್‌ನಿಂದ 35 ಬಸ್‌ಗಳು ಸಂಚರಿಸುತ್ತಿದ್ದು, ಈವರೆಗೆ ಕಿನ್ನಿಗೋಳಿ ಬಸ್‌ನವರು ಮಾಸಿಕ 4 ಸಾವಿರ ರೂ, ಉಡುಪಿ ಎಕ್ಸ್‌ಪ್ರೆಸ್ ಬಸ್‌ನವರು ಮಾಸಿಕ 5,500 ರೂ. ಪಾಸ್ ಪಡೆಯುತ್ತಿದ್ದರು. ಇನ್ನು ಮುಂದೆ ಟ್ರಿಪ್‌ಗಳ ಸಂಖ್ಯೆಯನ್ನು 90ಕ್ಕೆ ಸೀಮಿತಗೊಳಿಸಿ, ಶುಲ್ಕವನ್ನು ಮಾಸಿಕ 17ರಿಂದ 18 ಸಾವಿರ ರೂ.ವರೆಗೆ ನಿಗದಿಗೊಳಿಸುವುದಾಗಿ ಸೂಚಿಸಿದ್ದಾರೆ. ಇದು ಬಸ್ ಮಾಲೀಕರಿಗೆ, ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೆಜಮಾಡಿ, ತಲಪಾಡಿ ಟೋಲ್‌ಗಳಲ್ಲಿ ಸ್ಥಳೀಯ ಬಸ್‌ಗಳಿಗೆ ಟೋಲ್ ವಸೂಲಿ ಇಲ್ಲ. ಅಲ್ಲಿ ಇಲ್ಲದ ನಿಯಮ ಇಲ್ಲೇಕೆ? ಮರಳು ಅಭಾವ ಸಮಸ್ಯೆಯಿಂದ ಬಸ್‌ಗಳಿಗೂ ಗಳಿಕೆ ಕೊರತೆಯಾಗಿದೆ. ಬೇಡಿಕೆ ಬಗ್ಗೆ ಭಾನುವಾರ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ಅವರು ಈ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ ಎಂದರು.