ಶಾಸಕರು, ಸಂಸದರು ಕೆಲಸ ಮಾಡದಿದ್ರೆ ಅಧ್ಯಕ್ಷರೇ ಹೊಣೆ

ನವದೆಹಲಿ: ಯಾವುದೇ ಪಕ್ಷದ ಶಾಸಕರು ಉತ್ತಮವಾಗಿ ಕೆಲಸ ಮಾಡುತ್ತಿಲ್ಲ, ಸಂಸದರು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದಾದರೆ ಅದಕ್ಕೆ ಪಕ್ಷದ ಅಧ್ಯಕ್ಷರೇ ಹೊಣೆಯಾಗುತ್ತಾರೆ. ಇವರೆಲ್ಲರಿಗೂ ಸೂಕ್ತ ತರಬೇತಿ ನೀಡಿ, ಉತ್ತಮವಾಗಿ ಕೆಲಸ ನಿಭಾಯಿಸುವಂತೆ ಮಾಡಲು ಪಕ್ಷದ ಅಧ್ಯಕ್ಷರು ಏನು ಮಾಡಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಶ್ನಿಸಿದ್ದಾರೆ. ಇಂಟೆಲಿಜೆನ್ಸ್ ಬ್ಯೂರೋದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಂಗಳವಾರ ಅವರು ಮಾತನಾಡಿದರು. ಗೃಹ ಸಚಿವಾಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅತ್ಯುತ್ತಮ ತರಬೇತಿ ಪಡೆದ ಹಾಗೂ ಪ್ರತಿಭಾನ್ವಿತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವುದು ಇದಕ್ಕೆ ಕಾರಣ. ಆದರೆ ಪಕ್ಷದ ವಿಚಾರ ಬಂದಾಗ ಶಾಸಕರು ಮತ್ತು ಸಂಸದರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವಲ್ಲಿ ವಿಫಲವಾದಾಗ ಹೀಗೆಲ್ಲ ಆಗುತ್ತದೆ ಎಂದರು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದಕ್ಕೆ ಪಕ್ಷದ ನಾಯಕತ್ವವೇ ಹೊಣೆ ಹೊರಬೇಕು ಎಂದು ಪರೋಕ್ಷವಾಗಿ ಈ ಹಿಂದೆ ಅವರು ಹೇಳಿದ್ದರು. ಈಗ ಅವರ ಹೊಸ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ.