ನಿತಿನ್​ ಗಡ್ಕರಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸೋನಿಯಾ ಗಾಂಧಿ: ಸದನದಲ್ಲಿ ಮೇಜು ಬಡಿದು ಪ್ರಶಂಸೆ

ನವದೆಹಲಿ: ಸಾಮಾನ್ಯವಾಗಿ ಸಂಸತ್ತಿನ ಕಲಾಪಗಳಲ್ಲಿ ವಿರೋಧಗಳೇ ಹೆಚ್ಚಾಗಿರುತ್ತವೆ. ಆಡಳಿತ ಪಕ್ಷ ತಮ್ಮ ಕೆಲಸಗಳ ಬಗ್ಗೆ ಹೇಳಿದರೆ ಪ್ರತಿಪಕ್ಷ ಅದಕ್ಕೆ ವಿರೋಧ ವ್ಯಕ್ತಪಡಿಸುವುದೇ ಹೆಚ್ಚು. ಆದರೆ, ಇವತ್ತು ಯುಪಿಎ ನಾಯಕಿ ಸೋನಿಯಾ ಗಾಂಧಿ ಸೇರಿ ಕಾಂಗ್ರೆಸ್​ ನಾಯಕರೆಲ್ಲ ಸಚಿವ ನಿತಿನ್​ ಗಡ್ಕರಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಸಾರಿಗೆ ಸಚಿವ ನಿತಿನ್​ ಗಡ್ಕರಿಯವರಿಗೆ ಅವರ ಖಾತೆ ನಿರ್ವಹಿಸಿದ ಕೆಲಸ ಬಗ್ಗೆ ಹೇಳುವಂತೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಗಡ್ಕರಿಯವರು, ನನ್ನ ಸಚಿವಾಲಯದಿಂದ ಅತ್ಯುತ್ತಮ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲಾಗಿದೆ. ಈ ವಿಚಾರದಲ್ಲಿ ಎಲ್ಲ ಕ್ಷೇತ್ರದ ಸಂಸದರು, ರಾಜಕೀಯ ಅಂಗಸಂಸ್ಥೆಗಳು ಪಕ್ಷಭೇದ ಮರೆತು ನನ್ನನ್ನು ಪ್ರಶಂಸಿಸಿದ್ದಾರೆ ಎಂದು ತಿಳಿಸಿದರು.

ನಿತಿನ್​ ಗಡ್ಕರಿಯವರು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ ನಂತರ ಆಡಳಿತ ಬಿಜೆಪಿ ಸದಸ್ಯರೆಲ್ಲ ತಮ್ಮ ಎದುರಿನ ಟೇಬಲ್​ ಮೇಲೆ ಕೈಯಿಂದ ಕುಟ್ಟುತ್ತಾ ಸಂತಸ ವ್ಯಕ್ತಪಡಿಸಿದರು. ಮಧ್ಯಪ್ರದೇಶ ಬಿಜೆಪಿ ಮುಖಂಡ ಗಣೇಶ್​ ಸಿಂಗ್​ ಎದ್ದು ನಿಂತು, ನಿತಿನ್​ ಗಡ್ಕರಿಯವರು ಅಮೋಘವಾಗಿ ತಮ್ಮ ಕಾರ್ಯನಿರ್ವಹಿಸಿದ್ದು, ಅವರಿಗೆ ಸದನ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ನಿತಿನ್​ ಗಡ್ಕರಿಯವರ ಮಾತುಗಳನ್ನೆಲ್ಲ ಸಹನೆಯಿಂದ ಕೇಳಿದ ಸೋನಿಯಾ ಗಾಂಧಿ, ನಗುತ್ತ, ತಮ್ಮ ಎದುರಿನ ಮೇಜನ್ನು ಬಡಿಯುತ್ತ ಮೆಚ್ಚುಗೆ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿಯವರ ಸಂತೋಷವನ್ನು ನೋಡಿದ ಕಾಂಗ್ರೆಸ್​ ಸಂಸದರು, ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಎಲ್ಲರೂ ಸಹ ಮೇಜು ಬಡಿಯುತ್ತ, ಆಡಳಿತ ಪಕ್ಷದೊಂದಿಗೆ ಸೇರಿ ನಿತಿನ್​ ಗಡ್ಕರಿಯವರ ಕೆಲಸ ತೃಪ್ತಿಕರ ಎಂಬಂತೆ ಸೂಚನೆ ನೀಡಿದರು.
ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿ ಇರುವ ರಸ್ತೆ ಸಮಸ್ಯೆಗಳ ಬಗ್ಗೆ ಕಳೆದ ವರ್ಷ ಸೋನಿಯಾ ಗಾಂಧಿ ನಿತಿನ್​ ಗಡ್ಕರಿಯವರಿಗೆ ತಿಳಿಸಿದ್ದರು. ಅದಕ್ಕೆ ಗಡ್ಕರಿ ಸ್ಪಂದಿಸಿ ಕ್ರಮ ಕೈಗೊಂಡಿದ್ದರು. ಅದಾದ ಬಳಿಕ ಆಗಸ್ಟ್​ನಲ್ಲಿ ಸೋನಿಯಾ ನಿತಿನ್​ ಗಡ್ಕರಿಯವರಿಗೆ ಕೃತಜ್ಞತೆ ಸಲ್ಲಿಸಿ ಪತ್ರ ಬರೆದಿದ್ದರು.

ಬಿಜೆಪಿಯಲ್ಲಿ ಧೈರ್ಯವಿರುವುದು ನಿತಿನ್​ ಗಡ್ಕರಿಯವರಿಗೆ ಮಾತ್ರ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಇತ್ತೀಚೆಗೆ ಟ್ವೀಟ್​ ಮಾಡಿದ್ದರು.