ನಿಸ್ಪೃಹ ಸಾಗರ್ ಮುನಿಮಹಾರಾಜ್ ಸಮಾಧಿ ಮರಣ

ಧರ್ಮಸ್ಥಳ: ಸೋಮವಾರ ಸಲ್ಲೇಖನ ವ್ರತ ಕೈಗೊಂಡಿದ್ದ ಪೂಜ್ಯ ನಿಸ್ಪೃಹ ಸಾಗರ ಮುನಿಮಹಾರಾಜರು (75) ಮಂಗಳವಾರ ಬೆಳಗ್ಗೆ 7 ಗಂಟೆಗೆ ಧರ್ಮಸ್ಥಳ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಬಳಿ ಮುನಿಗಳು ವಾಸ್ತವ್ಯ ಇರುವ ಕುಟೀರದಲ್ಲಿ ಸಮಾಧಿ ಮರಣ ಹೊಂದಿದರು.

ನಿಸ್ಪೃಹ ಸಾಗರ ಮುನಿ ಮಹಾರಾಜರು ಮೂಲತಃ ರಾಜಸ್ಥಾನದ ಕಿಶನ್‌ಗಡ್ ನಿವಾಸಿ. 2009ರಲ್ಲಿ ಜೈನರ ಪವಿತ್ರ ತೀರ್ಥಕ್ಷೇತ್ರ ಚಂಪಾಪುರಿಯಲ್ಲಿ ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜರಿಂದ ದೀಕ್ಷೆ ಪಡೆದಿದ್ದರು. ಬಳಿಕ ಅವರ ಮುನಿ ಸಂಘದಲ್ಲಿದ್ದರು.

ಧರ್ಮಸ್ಥಳದಲ್ಲಿ ಬಾಹುಬಲಿ ಮಹಾ ಮಸ್ತಕಾಭಿಷೇಕದ ಸಾನ್ನಿಧ್ಯ ವಹಿಸಲು ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರ ಸಂಘದಲ್ಲಿ ನಿಸ್ಪೃಹ ಸಾಗರ ಮುನಿ ಮಹಾರಾಜರು ಕೂಡ ಫೆ.3ರಂದು ಧರ್ಮಸ್ಥಳ ಪುರ ಪ್ರವೇಶ ಮಾಡಿದ್ದರು. ಫೆ.18ರವರೆಗೆ ಮಹಾಮಸ್ತಕಾಭಿಷೇಕ ವೀಕ್ಷಿಸಿದ್ದ ಅವರು ಸೋಮವಾರ ಸಂಜೆ ಸಲ್ಲೇಖನ ವ್ರತಧಾರಣೆ (ಆಮರಣಾಂತ ಉಪವಾಸ) ಮಾಡಿದ್ದಾರೆ.

ಮಂಗಳವಾರ ಕೊನೆಯುಸಿರೆಳೆದ ಅವರ ಅಂತ್ಯಸಂಸ್ಕಾರವನ್ನು ಬಸದಿ ಬಳಿ ವೈಭವದ ಮೆರವಣಿಗೆ, ಧಾರ್ಮಿಕ ವಿಧಿ ಸಹಿತ ನಡೆಸಲಾಯಿತು.

ಮೆರವಣಿಗೆ ಬಳಿಕ ಅಂತ್ಯಸಂಸ್ಕಾರ:  ಶ್ರೀ 108 ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜರು ಮತ್ತು ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ಬಸದಿಯ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.

ಹೇಮಾವತಿ ವಿ. ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಡಾ.ಬಿ.ಯಶೋವರ್ಮ ಅಂತಿಮ ಗೌರವ ಸಲ್ಲಿಸಿದರು. ಸಕಲ ವೈಭವದ ಮೆರವಣಿಗೆಯೊಂದಿಗೆ ಪಂಚನಮಸ್ಕಾರ ಮಂತ್ರ ಪಠಣ ಮಾಡುತ್ತಾ, ಕುಟೀರದಿಂದ ಅಲಂಕೃತ ಆಸನದಲ್ಲಿ ಕೊಂಡು ಹೋಗಿ ಬಸದಿ ಬಳಿ ಇರುವ ಜಾಗದಲ್ಲಿ ತ್ರಿಕೋನಾಕಾರದಲ್ಲಿ ಚಿತೆ ರೂಪಿಸಿ, ದೇಹವನ್ನು ಪದ್ಮಾಸನದಲ್ಲಿ ಕುಳ್ಳಿರಿಸಿ, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ಮುನಿಗಳು ಮೃತ ದೇಹಕ್ಕೆ ನೀರು, ಹಾಲು, ತುಪ್ಪ ಮತ್ತು ಸಕ್ಕರೆಯ ಸೇಚನದೊಂದಿಗೆ ಅಭಿಷೇಕ ಮಾಡಿದರು. ಎಲ್ಲ ಮುನಿಗಳು ಮತ್ತು ಮಾತಾಜಿಯವರು ಪಂಚ ನಮಸ್ಕಾರ ಮಂತ್ರ ಪಠಣದೊಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.

ನಿಸ್ಪೃಹ ಸಾಗರ ಮುನಿ ಮಹಾರಾಜರ ಪೂರ್ವಾಶ್ರಮದ ಮಕ್ಕಳಾದ ಸಂಜಯಕುಮಾರ್ ಮತ್ತು ಪುನೀತ್ ಕುಮಾರ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಚಿತೆಗೆ ಗಂಧ ಮತ್ತು ಚಂದನದ ಕೊರಡುಗಳನ್ನು ಬಳಸಿ ಮೇಲೆ ತುಪ್ಪ ಸುರಿಯಲಾಯಿತು. ಚಿತೆಯ ಸನಿಹದಲ್ಲಿ ಮುನಿ ಸಂಘದವರು ಮತ್ತು ಮಾತಾಜಿಯವರು ಸಾಮೂಹಿಕ ಪ್ರತಿಕ್ರಮಣ ಮಾಡಿದರು (ಪ್ರಾಯಶ್ಚಿತ್ತ ಮಾಡಿಕೊಳ್ಳುವುದಕ್ಕೆ ಪ್ರತಿಕ್ರಮಣ ಎನ್ನುತ್ತಾರೆ. ಮುನಿಗಳು ಪ್ರತಿದಿನ ಮೂರು ಬಾರಿ ಪ್ರತಿಕ್ರಮಣ ಮಾಡುತ್ತಾರೆ.)