ಮೊದಲ ದಿನ ಸಿದ್ಧಾರ್ಥ್-ನಿಶ್ಚಲ್ ಶತಕದಾಟ

| ರಘುನಾಥ್ ಡಿ.ಪಿ.

ಬೆಂಗಳೂರು: ಯುವ ಬ್ಯಾಟ್ಸ್​ಮನ್​ಗಳಾದ ಡಿ.ನಿಶ್ಚಲ್ (107*ರನ್, 241 ಎಸೆತ, 7 ಬೌಂಡರಿ) ಹಾಗೂ ಕೆ.ವಿ. ಸಿದ್ಧಾರ್ಥ್ (105 ರನ್, 189 ಎಸೆತ, 11 ಬೌಂಡರಿ, 2 ಸಿಕ್ಸರ್) ಜೋಡಿಯ ಶತಕದಾಟದ ನೆರವಿನಿಂದ ಆತಿಥೇಯ ಕರ್ನಾಟಕ ಕಂಡ 85ನೇ ಆವೃತ್ತಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ತನ್ನ 7ನೇ ಲೀಗ್ ಪಂದ್ಯದಲ್ಲಿ ಛತ್ತೀಸ್​ಗಢ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.

ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್​ಸಿಎ ರಾಮ್್ರಸಾದ್ ಓವಲ್ ಮೈದಾನದಲ್ಲಿ ಭಾನುವಾರ ಆರಂಭಗೊಂಡ ಪಂದ್ಯದಲ್ಲಿ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಮೊದಲ ದಿನದಂತ್ಯಕ್ಕೆ 4 ವಿಕೆಟ್​ಗೆ 273 ರನ್ ಪೇರಿಸಿದೆ. ಶತಕ ಸಾಧಕ ನಿಶ್ಚಲ್ ಹಾಗೂ ಉಪನಾಯಕ ಶ್ರೇಯಸ್ ಗೋಪಾಲ್ (8*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಟಾಸ್ ಜಯಿಸಿದ ಪ್ರವಾಸಿ ತಂಡದ ನಾಯಕ ಹರ್​ಪ್ರೀತ್ ಸಿಂಗ್ ಭಾಟಿಯಾ ಆತಿಥೇಯ ಕರ್ನಾಟಕ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ನಾಯಕನ ಲೆಕ್ಕಾಚಾರಕ್ಕೆ ಅನುಗುಣವಾಗಿ ಬೌಲಿಂಗ್ ಮಾಡಿದ ವೇಗಿ ಪಂಕಜ್ ರಾವ್ (38ಕ್ಕೆ 4) ಮಾರಕ ದಾಳಿಯಿಂದ ಕರ್ನಾಟಕಕ್ಕೆ ಆಘಾತ ನೀಡಿದರು. 3ನೇ ಓವರ್​ನಲ್ಲೇ ದೇವದತ್ ಪಡಿಕ್ಕಲ್ ಖಾತೆ ತೆರೆಯುವ ಮುನ್ನವೇ ಪಂಕಜ್ ರಾವ್ ಎಸೆತದಲ್ಲಿ 2ನೇ ಸ್ಲಿಪ್​ನಲ್ಲಿದ್ದ ಹರ್​ಪ್ರೀತ್​ಗೆ ಕ್ಯಾಚ್ ನೀಡಿದರು. ಬಳಿಕ ಬಂದ ಲಿಯಾನ್ ಖಾನ್ (9) ಪದಾರ್ಪಣೆ ಪಂದ್ಯದಲ್ಲೇ ಗಮನಸೆಳೆಯಲು ವಿಫಲರಾದರು. ಇದರಿಂದ 16 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡ ಕರ್ನಾಟಕ ಆಘಾತ ಎದುರಿಸಿತು.

ನಿಶ್ಚಲ್ ಸಿದ್ಧಾರ್ಥ್ ಆಸರೆ

ಆರಂಭಿಕ ಆಘಾತದಿಂದ ತತ್ತರಿಸಿದ್ದ ಕರ್ನಾಟಕ ತಂಡಕ್ಕೆ ಆರಂಭಿಕ ನಿಶ್ಚಲ್​-ಸಿದ್ಧಾರ್ಥ್ ಜೋಡಿ 3ನೇ ವಿಕೆಟ್​ಗೆ 163 ರನ್ ಸೇರಿಸಿ ಆಸರೆಯಾಯಿತು. ಒಂದೆಡೆ, ಸಿದ್ಧಾರ್ಥ್ ಬಿರುಸಿನ ಬ್ಯಾಟಿಂಗ್ ತೋರುತ್ತಿದ್ದರೆ, ಮತ್ತೊಂದೆಡೆ ನಿಶ್ಚಲ್ ಜಿಗುಟು ಬ್ಯಾಟಿಂಗ್ ಮುಂದುವರಿಸಿದರು. 2 ಭರ್ಜರಿ ಸಿಕ್ಸರ್ ಸಿಡಿಸುವುದರೊಂದಿಗೆ ಬಿರುಸಿನ ಬ್ಯಾಟಿಂಗ್ ತೋರಿದ ಸಿದ್ಧಾರ್ಥ್ ಶತಕದತ್ತ ಸಾಗುತ್ತಿದ್ದರೂ ನಿಶ್ಚಲ್ ಎದುರಿಸಿದ 164ನೇ ಎಸೆತದಲ್ಲಿ 2 ಬೌಂಡರಿ ಒಳಗೊಂಡಂತೆ ಅರ್ಧಶತಕ ಪೂರೈಸಿಕೊಂಡರು. ಕೆವಿ ಸಿದ್ಧಾರ್ಥ್ 94 ರನ್​ಗಳಿಸಿದ್ದ ವೇಳೆ ವಿಶಾಲ್ ಸಿಂಗ್ ಎಸೆದ ದಿನದ 65ನೇ ಓವರ್​ನಲ್ಲಿ ಎಲ್​ಬಿ ಬಲೆ ಬಿದ್ದರು. ಆದರೆ, ಮೂರನೇ ಅಂಪೈರ್ ಮೂಲಕ ಮರುಪರಿಶೀಲಿಸಿದಾಗ ವಿಶಾಲ್ ಎಸೆತ ನೋಬಾಲ್ ಆಗಿತ್ತು. ನಿರಾಸೆಯೊಂದಿಗೆ ಪೆವಿಲಿಯನ್​ನತ್ತ ಹೆಜ್ಜೆಹಾಕುತ್ತಿದ್ದ ಸಿದ್ಧಾರ್ಥ್ ಕ್ರೀಸ್​ಗೆ ವಾಪಸಾದರು. ಜೀವದಾನದ ಲಾಭ ಗಿಟ್ಟಿಸಿದ ಸಿದ್ಧಾರ್ಥ್ ಚಹಾ ವಿರಾಮಕ್ಕೂ ಮುನ್ನ ಅಜಯ್ ಮಂಡಲ್ ಎಸೆತವನ್ನು ಲಾಂಗ್​ಆನ್ ಕಡೆಗೆ ಬಾರಿಸಿ 2ನೇ ಶತಕ ಪೂರೈಸಿಕೊಂಡರು. ಚಹಾ ವಿರಾಮ ಬಳಿಕ 2ನೇ ಓವರ್​ನಲ್ಲಿ ಪಂಕಜ್ ರಾವ್ ಎಸೆತದಲ್ಲಿ ಎಲ್​ಬಿಯಾದರು. ಬಳಿಕ ನಿಶ್ಚಲ್​ಗೆ ಜತೆಯಾದ ನಾಯಕ ಮನೀಷ್ ಪಾಂಡೆ (40ರನ್, 61 ಎಸೆತ, 5 ಬೌಂಡರಿ) ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದರು. 4ನೇ ವಿಕೆಟ್​ಗೆ 74 ರನ್ ಸೇರಿಸಿದ ಈ ಜೋಡಿಗೆ ಪಂಕಜ್ ರಾವ್ ಆಘಾತ ನೀಡಿದರು. ಬಳಿಕ ಶ್ರೇಯಸ್ ಗೋಪಾಲ್​ರಿಂದ ಸಾಥ್ ಪಡೆದ ನಿಶ್ಚಲ್ ಪ್ರಸಕ್ತ ಆವೃತ್ತಿಯ 3ನೇ ಶತಕ ಸಿಡಿಸಿ ಸಿಡಿಸಿದರು.