ಮನಸ್ಸಿನಲ್ಲಿ ಮೂಡುವ ವೈರ ಭಾವನೆಯಿಂದ ಮನಸ್ಸು ಕಲುಷಿತ ಗೊಂಡು ಅನಾರೋಗ್ಯಕ್ಕೆ ಕಾರಣವಾಗುವುದು. ಅಂತೆಯೇ ಚರಕ ಮಹರ್ಷಿಗಳು ನಿರ್ವೆರ ಭಾವನೆಯೂ ಒಂದು ದಿವ್ಯ ರಸಾಯನ ಎಂಬುದಾಗಿ ಬೋಧಿಸಿದ್ದಾರೆ. ಇಬ್ಬರು ವ್ಯಕ್ತಿಗಳ ನಡುವೆ ಪರಸ್ಪರ ವೈರಭಾವನೆ ಬೆಳೆಯಲು ಮುಖ್ಯವಾಗಿ ಶಾಸ್ತ್ರಗಳಲ್ಲಿ – ವೈರಂ ಪಂಚವಿಧಂ ಫ್ರೋಕ್ತಂ ಮುನಿಭಿಃ ಶಾಸ್ತ್ರಪಾರಗೈಃ| ಸ್ತ್ರೀಕೃತಂ ವಾಸ್ತುಜಂ ವಾಗ್ಜಂ ಸಸಾಪತ್ನಾ್ಯಪ ರಾಧಜಮ್| – ಎಂಬ ಈ ಸುಭಾಷಿತದಂತೆ ಸ್ತ್ರೀ, ವಾಸ್ತು, ವಾಣಿ, ಸವತಿ ಮಾತ್ಸರ್ಯ ಮತ್ತು ವಿವಿಧ ಅಪರಾಧಗಳೆಂಬ ಐದು ಮುಖ್ಯ ಕಾರಣಗಳನ್ನು ಹೇಳಿದ್ದಾರೆ.
ಇವುಗಳಲ್ಲಿ ಮೊದಲನೇ ಕಾರಣವೇ ಸ್ತ್ರೀ. ಒಬ್ಬ ಸ್ತ್ರೀಯನ್ನು ಇಬ್ಬರು ವ್ಯಕ್ತಿಗಳು ಅಪೇಕ್ಷೆ ಪಟ್ಟಾಗ ಅವರೀರ್ವರಲ್ಲಿ ಪ್ರಬಲವಾದ ವೈರ ಭಾವನೆಯು ಬೆಳೆದು ಅನರ್ಥವಾಗುವ ಉದಾಹರಣೆಗಳನ್ನು ಇತಿಹಾಸದಲ್ಲಿ ಕಾಣುತ್ತೇವೆ. ವೈರಕ್ಕೆ ಎರಡನೇ ಕಾರಣವೇ ವಾಸ್ತು ಅಂದರೆ ಭೂಮಿ ಸೀಮೆಗಳು. ದಾಯಾದಿಗಳಲ್ಲಿ ಭೂಮಿ ಸೀಮೆಯ ನಿಮಿತ್ತವಾಗಿ ಪ್ರಬಲ ವೈರ ಉಂಟಾಗುವದಕ್ಕೆ ಮಹಾಭಾರತವೇ ಒಂದು ಜ್ವಲಂತ ಉದಾಹರಣೆ. ಇನ್ನು ಮೂರನೆಯ ಕಾರಣವೆಂದರೆ ವಾಣಿಯು. ಮನುಷ್ಯ ಮಾತಿನಿಂದ ಮಿತ್ರತ್ವವನ್ನು ಪಡೆದುಕೊಳ್ಳುವಂತೆ ಶತ್ರುತ್ವವನ್ನೂ ಪಡೆದುಕೊಳ್ಳುತ್ತಾನೆ. ಆದ್ದರಿಂದ ಅಸಂಬದ್ಧವಾದ ವಾಣಿಯ ಪ್ರಯೋಗದಿಂದ ಪರಸ್ಪರಲ್ಲಿ ಶತ್ರು ಭಾವನೆಯು ಉಂಟಾಗುವುದು.
ಇನ್ನು ನಾಲ್ಕನೆಯ ಕಾರಣವೆಂದರೆ ಸವತಿ ಮಾತ್ಸರ್ಯವು. ಒಬ್ಬ ವ್ಯಕ್ತಿಯು ಯಾವುದೋ ನಿಮಿತ್ತವಾಗಿ ಎರಡು ಮದುವೆಯನ್ನು ಮಾಡಿಕೊಂಡನೆಂದರೆ ಆ ಇಬ್ಬರು ಹೆಣ್ಣು ಮಕ್ಕಳಲ್ಲಿ ಸವತಿಮಾತ್ಸರ್ಯ ಉಂಟಾಗಿ ಮನೆಯಲ್ಲಿ ಕಲಹಗಳು ನಡೆಯುತ್ತಲೇ ಇರುತ್ತವೆ. ಇನ್ನು ಐದನೇ ಕಾರಣವೆಂದರೆ ಅಪರಾಧ. ಯಾವುದೇ ಅಪರಾಧ ಮಾಡಿದಾಗ ಆ ನಿಮಿತ್ತವಾಗಿಯೂ ವೈರಭಾವನೆಯು ಮೂಡಿಬರುವುದು. ಆರೋಗ್ಯದ ಹಾನಿಯಲ್ಲಿ ಈ ವೈರಭಾವದ ಪಾತ್ರವು ಮಹತ್ವದ್ದಾಗಿರುವುದರಿಂದ ಈ ವೈರ ಭಾವನೆಯನ್ನು ಕಳೆದುಕೊಂಡಾಗ ಮಾತ್ರ ಪ್ರತಿಯೊಬ್ಬರೂ ಸ್ವಸ್ಥರಾಗಿರಲು ಸಾಧ್ಯ.
ಅಂತೆಯೇ ಚರಕ ಮಹರ್ಷಿಗಳು ನಿರ್ವೈರ ಭಾವನೆಯಿಂದ ಬದುಕನ್ನು ಸಾಗಿಸುವ ಸಂದೇಶವನ್ನು ಕೊಟ್ಟಿದ್ದಾರೆ. ಆದ್ದರಿಂದ ನಿರ್ವೆರ ಭಾವನೆಯೂ ಕೂಡ ಒಂದು ಶ್ರೇಷ್ಠವಾದ ರಸಾಯನ ಎಂದು ಭಾವಿಸಲಾಗಿದೆ.
BBK11: ಫಿನಾಲೆ ಓಟದಿಂದ ಹೊರಬಿದ್ದ ‘ಬಿಗ್’ ಸ್ಪರ್ಧಿ ಚೈತ್ರಾ ಕುಂದಾಪುರ!