ಅನುರಣಿಸಿದ ಕಾಯಕ- ಆರೋಗ್ಯ ಮಂತ್ರ

ಭಾರತೀಯ ಸಂಸ್ಕೃತಿ ಉತ್ಸವದ 6ನೇ ದಿನ ಕಾಯಕ ಮತ್ತು ಆರೋಗ್ಯ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ‘ಉತ್ತಮ ದುಡಿಮೆಯೇ ಸದೃಢ ಆರೋಗ್ಯಕ್ಕೆ ರಹದಾರಿ’, ‘ಸಂತೃಪ್ತಿಯಿಂದ ದುಡಿದು ಸಂತೃಪ್ತಿಯಿಂದ ಬದುಕುವುದನ್ನು ಕಲಿತರೆ ಜೀವನದ ಬಹುತೇಕ ಸಮಸ್ಯೆಗಳು ಪರಿಹಾರವಾದಂತೆ’ ಎಂಬ ಸಂದೇಶಗಳು ಮೊಳಗಿದವು. ವಿಷಮುಕ್ತ, ರಾಸಾಯನಿಕಮುಕ್ತ ಆಹಾರಗಳು ನಮ್ಮ ಅಡುಗೆಮನೆ ತುಂಬಿಕೊಂಡರೆ, ಅನಾರೋಗ್ಯವನ್ನು ಮನೆ- ಸಮಾಜದಿಂದ ಹೊರದೂಡಬಹುದು. ಆರೋಗ್ಯಯುತ ಸಮಾಜವೇ ಉತ್ತಮ ರಾಷ್ಟ್ರ ನಿರ್ವಣಕ್ಕೆ ಬುನಾದಿ ಆಗಬಲ್ಲದು ಎಂಬುದನ್ನು ಗಟ್ಟಿದನಿಯಲ್ಲಿ ಸಾರಿತು. ಭಾರತೀಯ ದೇಸಿ ಪದ್ಧತಿಯ ಚಿಕಿತ್ಸಾ ವಿಧಾನಗಳೇ ಮತ್ತೆ ಮುನ್ನೆಲೆಗೆ ಬರಬೇಕಿದೆ, ಆಯುರ್ವೆದ ಬರೀ ಚಿಕಿತ್ಸಾ ಪದ್ಧತಿಯಲ್ಲ, ಅದು ಸಂಸ್ಕಾರವೂ ಹೌದು.. ಎಂಬ ಅರಿವು ಮೂಡಿಸಲಾಯಿತು.

| ರವೀಂದ್ರ ಎಸ್. ದೇಶಮುಖ್ ಕಗ್ಗೋಡು (ವಿಜಯಪುರ)

ನಮ್ಮ ಮೂಲ ಜೀವನ ಪದ್ಧತಿಯನ್ನು ಅಳವಡಿಸಿಕೊಂಡು, ನಿಸರ್ಗಕ್ಕೆ ಪೂರಕವಾಗಿ ಬದುಕಿದರೆ ಆರೋಗ್ಯವಂತ ಜೀವನ ನಮ್ಮದಾಗುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಕಗ್ಗೋಡದಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ 6ನೇ ದಿನವಾದ ಶನಿವಾರದಂದು ನಡೆದ ಕಾಯಕ-ಆರೋಗ್ಯ ಸಂಗಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲು ನಮ್ಮ ದೇಹದ ಜೈವಿಕ ಗಡಿಯಾರ ನಿಸರ್ಗದೊಂದಿಗೆ ತಾದ್ಯಾತ್ಮ ಹೊಂದಿತ್ತು. ಆರೋಗ್ಯಯುತ ಆಹಾರ ಸೇವನೆ, ಸಂಜೆ ಸೂರ್ಯೋದಯದ ಮುನ್ನ ಭೋಜನ ಜೀವನಕ್ರಮವಾಗಿದ್ದವು. ಅಲ್ಲದೆ, ಆಯಾ ಪ್ರದೇಶಕ್ಕೆ- ಪರಿಸರಕ್ಕೆ ಪೂರಕವಾದ, ಅಲ್ಲೇ ಬೆಳೆದ ಆಹಾರ ಧಾನ್ಯ ಸೇವಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದು ಸಂಪೂರ್ಣ ವ್ಯತಿರಿಕ್ತವಾಗಿದ್ದು, ಹೊರಗಡೆ ಪ್ರಾಂತ್ಯದ ಆಹಾರ ಹೊಂದದಿದ್ದರೂ ಫ್ಯಾಷನ್ ಹೆಸರಿನಲ್ಲಿ ಅದನ್ನು ಸೇವಿಸುತ್ತಿದ್ದಾರೆ. ದುಬಾರಿ ಬೆಲೆ ತೆತ್ತು ಇವನ್ನು ಖರೀದಿಸುವುದಲ್ಲದೆ, ಅನಾರೋಗ್ಯ ಪೀಡಿತರಾಗಿ ಚಿಕಿತ್ಸೆಗೂ ಹಣ ಖರ್ಚು ಮಾಡುತ್ತಿದ್ದಾರೆ ಎಂದರು.

ಸ್ವದೇಶಿ ಚಿಂತಕ ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಜಿಡಿಪಿ ಹೆಚ್ಚಳ ಅಭಿವೃದ್ಧಿಯ ಮಾನದಂಡವಲ್ಲ. ಪ್ರತಿವರ್ಷ ಉದ್ಯೋಗ ಮಾರುಕಟ್ಟೆಗೆ 12 ದಶಲಕ್ಷ ಜನ ಆಗಮಿಸುತ್ತಿದ್ದು, 1 ದಶಲಕ್ಷ ಜನರಿಗಷ್ಟೇ ಕೆಲಸ ಸಿಗುತ್ತಿದೆ. ಪ್ರಭುತ್ವಗಳು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೃಷಿ, ಕೃಷಿಯಾಧಾರಿತ ಉದ್ಯೋಗಗಳು ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗಬೇಕು.

ಭಾರತದ ಸ್ಥಿತಿ, ಬಡತನದ ಸಾಗರದ ನಡುವೆ ಸಿರಿವಂತಿಕೆಯ ದ್ವೀಪಗಳು’ ಎಂಬಂತಾಗಿದೆ. ಬಿಲಿಯನೆರ್​ಗಳ ಸಂಖ್ಯೆ ಹೆಚ್ಚಾದರೆ ಅದು ಅಭಿವೃದ್ಧಿ ಅಲ್ಲ, ವರ್ಷದಿಂದ ವರ್ಷಕ್ಕೆ ಉದ್ಯೋಗಸೃಷ್ಟಿ ಸಂಖ್ಯೆ ಹೆಚ್ಚಿದರೆ ಅದು ಅಭಿವೃದ್ಧಿ ಎಂದು ಪ್ರತಿಪಾದಿಸಿದ ಸ್ವದೇಶಿ

ಚಿಂತಕ ಬಿ.ಎಂ.ಕುಮಾರಸ್ವಾಮಿ ಉದ್ಯೋಗಾಧಾರಿತ ಅಭಿವೃದ್ಧಿ ನಮಗೆ ಬೇಕಿದ್ದು, ಸರ್ಕಾರದ ಮೇಲೆ ಈ ನಿಟ್ಟಿನಲ್ಲಿ ಜನಸಾಮಾನ್ಯರೂ ಒತ್ತಡ ತರಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ವಿಕಾಸ ಸಂಗಮದ ರಾಷ್ಟ್ರೀಯ ಪೋಷಕ ಬಸವರಾಜ್

ಪಾಟೀಲ್ ಸೇಡಂ, ಹಣ್ಣು, ಆಹಾರಧಾನ್ಯ, ತರಕಾರಿ ಎಲ್ಲದರ ಮೂಲಕವೂ ವಿಷ ಸೇವಿಸುತ್ತಿದ್ದೇವೆ. ರಾಸಾಯನಿಕಗಳನ್ನು ಬಳಸಿ ಬೆಳೆದ ಈ ಉತ್ಪನ್ನಗಳು ಮಾನವನ ಆರೋಗ್ಯವನ್ನು ಸಂಪೂರ್ಣವಾಗಿ ಹಾಳುಗೆಡವುತ್ತಿವೆ. ಸಾವಯವ, ಪೌಷ್ಟಿಕ ಆಹಾರಕ್ರಮ ಮತ್ತು ಉತ್ತಮ ಜೀವನಶೈಲಿಯತ್ತ ಮುಖ ಮಾಡಲು ಇದು ಸಕಾಲ ಎಂದರು.

ಮನೋವಿಜ್ಞಾನಿ ಡಾ. ಜಿ. ಸ್ವಾಮಿನಾಥ, ಸಮಾಜ ಸೇವಕ ಸಂಜಯ ಕಾಂಬ್ಳೆ, ಕೇರಳದ ಖ್ಯಾತ ಆಯುರ್ವೆದ ತಜ್ಞ ಡಾ. ಕೃಷ್ಣ ಕುಮಾರನ್ ಮಾತನಾಡಿದರು. ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಧ್ಯಪ್ರದೇಶದ ಖ್ಯಾತ ಪ್ರವಚನಕಾರ ಸುಮನ್ ಭಾಯಿ ಗುರೂಜಿ ಸಾನ್ನಿಧ್ಯ ವಹಿಸಿದರು.

ಭಾರತೀಯ ವಿಕಾಸ ಸಂಗಮದ ರಾಷ್ಟ್ರೀಯ ಸಂಯೋಜಕ ಕೆ.ಎನ್. ಗೋವಿಂದಾಚಾರ್ಯ, ಸಂಸದ ಸುರೇಶ ಅಂಗಡಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಉಪಸ್ಥಿತರಿದ್ದರು. ಸಂಜೆ ಕೊಲ್ಹಾಪುರ ಕಲಾವಿದರು ಪ್ರದರ್ಶಿಸಿದ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಆಧಾರಿತ ‘ಶಿವ ಘರ್ಜನೆ’ ನಾಟಕ ಪ್ರದರ್ಶನ ಆಕರ್ಷಣೀಯವಾಗಿತ್ತು. ಇಂದಿನ ದಿನಗಳಲ್ಲಿ ಯಾರೇ ಕೇಳಿದರೂ ತಮ್ಮ ಉದ್ಯೋಗ ಸ್ಟ್ರೆಸ್​ಫುಲ್ ಎಂದು ಹೇಳುತ್ತಾರೆ.

ಇದರಿಂದ ಮಾನಸಿಕ ನೆಮ್ಮದಿಯೂ ಹಾಳಾಗಿ, ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದ್ದಾರೆ. ನಾವು ಮಾಡುವ ಕೆಲಸವನ್ನು ಇಷ್ಟ ಪಡಬೇಕು, ಅದನ್ನು ಪ್ರೀತಿಸಬೇಕು.

ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಬೇಕು, ಆಗ ಮಾತ್ರ ನೆಮ್ಮದಿ ನಮ್ಮದಾಗಬಹುದು. ಸೇವೆ ಮತ್ತು ತ್ಯಾಗ ಈ ದೇಶದ ದೊಡ್ಡ ಮೌಲ್ಯಗಳಾಗಿವೆ. ಈ ಮೌಲ್ಯಗಳ ಆಧಾರದ ಮೇಲೆ ದೇಶ ಬಲಿಷ್ಠವಾಗಿ ನಿಂತಿದೆ.

| ನಿರ್ಮಲಾ ಸೀತಾರಾಮನ್ ಕೇಂದ್ರ ರಕ್ಷಣಾ ಸಚಿವೆ

ಯಾವುದೇ ಕಾಯಕ ಮಾಡಿದರೂ ಅದನ್ನು ಅಚ್ಚುಕಟ್ಟಾಗಿ ಮಾಡಿ. ನಮ್ಮಲ್ಲಿ ಕಾಯಕ ಸಂಸ್ಕೃತಿ ಮರೆಯಾಗುತ್ತಿರುವುದು ಬೇಸರದ ಸಂಗತಿ. ಕಾಯಕ ಮಾಡುವುದೇ ಶ್ರೇಷ್ಠ ಎಂಬ ಅರಿವು ಜಾಗೃತವಾಗಲಿ. ದುಡ್ಡು ಗಳಿಕೆಯೇ ಕಾಯಕವಾಗಬಾರದು. ಪ್ರಾಮಾಣಿಕ ದುಡಿಮೆ, ಕಾಯಕ ವ್ಯಕ್ತಿಯನ್ನು ಶ್ರೇಷ್ಠವಾಗಿಸಬಲ್ಲದು.

| ಡಾ. ಸಿ.ಆರ್. ಚಂದ್ರಶೇಖರ್ ಖ್ಯಾತ ಮನಃಶಾಸ್ತ್ರಜ್ಞ