More

    ನಿರ್ಲಿಪ್ತ ಹೀರೋ; ಕುತೂಹಲ ಇದೆ, ನಿರೀಕ್ಷೆ ಇಲ್ಲ…

    ಇದುವರೆಗೂ ನೆಗೆಟಿವ್ ಶೇಡ್​ನಲ್ಲೇ ಕಾಣಿಸಿಕೊಳ್ಳುತ್ತಿದ್ದ ವಸಿಷ್ಠ ಸಿಂಹ, ಪ್ರಪ್ರಥಮ ಬಾರಿಗೆ ನಾಯಕನಾಗಿ ನಟಿಸಿರುವ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ ಅವರ ನಿರ್ದೇಶನದಲ್ಲಿ ಮಾನ್ವಿತಾಗೆ ನಾಯಕನಾಗಿ, ಸುಮಲತಾಗೆ ಮಗನಾಗಿ ಅಭಿನಯಿಸಿರುವ ವಸಿಷ್ಠ ತಮ್ಮ ಚಿತ್ರ-ಪಾತ್ರ-ಬದುಕಿನ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ.

    ‘ನಿರ್ಲಿಪ್ತ..’ ವಸಿಷ್ಠ ಸಿಂಹ ಇದೇ ಮೊದಲ ಸಲ ನಾಯಕನಾಗಿದ್ದಾರೆ. ಹೀರೋ ಆಗಿ ಅವರು ಕಾಣಿಸಿಕೊಳ್ಳುತ್ತಿರುವ ಪ್ರಪ್ರಥಮ ಸಿನಿಮಾ ಶುಕ್ರವಾರ ಎಲ್ಲೆಡೆ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಹೇಗನಿಸುತ್ತಿದೆ, ಸಿನಿಮಾ ಕುರಿತು ಯಾವ ಥರ ನಿರೀಕ್ಷೆ ಇಟ್ಟುಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ಅವರು ಹೇಳಿದ್ದು ಈ ಮೇಲಿನ ಒಂದು ಪದ, ಅದೇ.. ‘ನಿರ್ಲಿಪ್ತ’.

    ‘ಒಂದು ಸಿನಿಮಾದ ಕಮರ್ಷಿಯಲ್ ಸಕ್ಸಸ್ ನಮ್ಮ ಮೌಲ್ಯ ಅಥವಾ ಸಾಮರ್ಥ್ಯ ನಿರ್ಧರಿಸುವುದಿಲ್ಲ. ಗೆದ್ದಿರುವ ಎಲ್ಲ ಸಿನಿಮಾ ಒಳ್ಳೆಯದು, ಸೋತಿರುವ ಎಲ್ಲ ಸಿನಿಮಾ ಕೆಟ್ಟದ್ದು ಎನ್ನಲು ಆಗುವುದಿಲ್ಲ. ಫಲಿತಾಂಶ ಏನೇ ಬಂದರೂ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ಸಿನಿಮಾ ಮಾಡುವುದಕ್ಕಿಂತ ಅದರ ಆಗು-ಹೋಗುಗಳಿಂದ ಕಲಿಯುವುದೇ ಜಾಸ್ತಿ. ಆದ್ದರಿಂದ ಅಂಥ ಯಾವ ನಿರೀಕ್ಷೆ ಇಟ್ಟುಕೊಳ್ಳದೆ ನಿರ್ಲಿಪ್ತನಾಗಿದ್ದೇನೆ’ ಎನ್ನುತ್ತಾರೆ ವಸಿಷ್ಠ ಸಿಂಹ.

    ಅದಾಗ್ಯೂ ನಾಯಕನಾಗಿ ಇದು ಅವರ ಮೊದಲ ಸಿನಿಮಾ ಆಗಿರುವುದರಿಂದ ಒಂದಷ್ಟು ಮಿಶ್ರಭಾವನೆ ಅವರಲ್ಲಿದೆಯಂತೆ. ‘ನಿಜ.. ಸ್ವಲ್ಪ ಖುಷಿ, ಸ್ವಲ್ಪ ಭಯ ಎರಡೂ ಇದೆ. ಏಕೆಂದರೆ ಇದೊಂದು ದೊಡ್ಡ ಜವಾಬ್ದಾರಿ. ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ, ಹಾಕಿರುವ ಶ್ರಮಕ್ಕೆ ಯಾವ ರೀತಿ ಫಲ ಸಿಗುತ್ತದೆ, ಜನರ ಪ್ರತಿಕ್ರಿಯೆ ಏನಿರಬಹುದು? ಎಂಬುದನ್ನೆಲ್ಲ ತಿಳಿದುಕೊಳ್ಳುವ ಕುತೂಹಲವಂತೂ ಇದ್ದೇ ಇದೆ’ ಎನ್ನುತ್ತಾರೆ ನವನಾಯಕ.

    ನಾನು ಪುಣ್ಯವಂತ: ಮೊದಲ ಸಲ ಹೀರೋ ಆಗಿರುವುದರಿಂದ ಅವರ ಪಾತ್ರ ಹೇಗಿರಬಹುದು ಎಂಬ ಕುತೂಹಲ ಹಲವರಿಗೆ ಇರುವುದು ಸಹಜ. ಹೀಗಾಗಿ ಪಾತ್ರದ ಬಗ್ಗೆ ವಿವರಣೆ ನೀಡುವ ವಸಿಷ್ಠ, ‘ಇಲ್ಲಿ ನಾನೊಬ್ಬ ಬ್ಲಾಗರ್ ಆಗಿ ನಟಿಸಿದ್ದೇನೆ. ಹೀರೋ ಎನ್ನುವುದಕ್ಕಿಂತ ಒಬ್ಬ ವಿಶ್ಲೇಷಕನ ಪಾತ್ರ ಮಾಡಿದ್ದೇನೆ. ನಾಯಕ ಬ್ರಿಟನ್​ನಲ್ಲಿ ಹುಟ್ಟಿದವನಾದರೂ ಬೈ ಹಾರ್ಟ್ ಕನ್ನಡಿಗನಾಗಿರುತ್ತಾನೆ. ವಿದೇಶದಲ್ಲೇ ವಿದ್ಯಾಭ್ಯಾಸ ಮುಗಿಸಿರುವ ಆತ ಅಧ್ಯಯನಕ್ಕಾಗಿ ಭಾರತಕ್ಕೆ ಬರುತ್ತಾನೆ’ ಎನ್ನುತ್ತಾರೆ. ‘ಘಜ್ನಿ ಮಹಮ್ಮದ್ ಭಾರತದ ಮೇಲೆ 17 ಬಾರಿ ದಾಳಿ ಮಾಡಿದ್ದ ಎಂದು ನಾವೆಲ್ಲ ಇತಿಹಾಸದಲ್ಲಿ ಓದಿರುತ್ತೇವೆ. ಆದರೆ ಅವನನ್ನು 17 ಸಲ ಹಿಮ್ಮೆಟ್ಟಿಸಿದ್ದು ಯಾರು ಎಂಬ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ. ಅಂಥ ವಿಷಯಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ. ಒಂಥರ ಇಲ್ಲಿ ಹಿಸ್ಟರಿ, ಮಿಸ್ಟರಿ, ಪ್ರೀತಿ-ಪ್ರೇಮ ಎಲ್ಲವೂ ಇದೆ’ ಎಂದು ಪಾತ್ರದ ಜತೆಗೆ ಚಿತ್ರದ ಕುರಿತೂ ಮಾಹಿತಿ ನೀಡಿದರು.

    ಮೊದಲ ಸಿನಿಮಾದಲ್ಲೇ ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದೇ ಅವರಿಗೆ ದೊಡ್ಡ ಸಂತೋಷ. ‘ನಾಗತಿಹಳ್ಳಿ ಅವರು ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ನುರಿತ ಕಲಾವಿದರನ್ನು ಹಾಕಿಕೊಂಡೂ ಚಿತ್ರ ತಯಾರಿಸಿದ್ದಾರೆ. ಆದರೆ ನಾನು ಇಲ್ಲಿ ಹಾಗೂ ಅಲ್ಲ, ಹೀಗೂ ಅಲ್ಲ ಆಗಿರುವುದರಿಂದ ಅವರು ನನ್ನನ್ನು ಹೀರೋ ಮಾಡುತ್ತೇನೆ ಎಂದಾಗ ಆಶ್ಚರ್ಯವಾಗಿತ್ತು. ಅವರೊಂದಿಗೆ ಕಾಲ ಕಳೆಯುವುದೇ ಒಂದು ವಿಶೇಷ. ಅವರಿಂದ ತುಂಬ ತಿಳಿದುಕೊಳ್ಳಬಹುದು. ಇಲ್ಲಿ ನನ್ನ ಅಮ್ಮನಾಗಿ ಸುಮಲತಾ ಅಭಿನಯಿಸಿದ್ದಾರೆ. ಇನ್ನು ಪ್ರಕಾಶ್ ಬೆಳವಾಡಿ ಮಾತ್ರವಲ್ಲದೆ ಮತ್ತೊಮ್ಮೆ ಅನಂತನಾಗ್ ಅವರೊಂದಿಗೆ ನಟಿಸುವ ಅವಕಾಶವೂ ಸಿಕ್ಕಿದೆ. ಇವೆಲ್ಲದರಿಂದ ನಾನು ಪುಣ್ಯವಂತ ಅನಿಸುತ್ತದೆ’ ಎನ್ನುತ್ತಾರೆ ಅವರು.

    ಸಾಫ್ಟ್​ವೇರ್ ಟು ಸ್ಯಾಂಡಲ್​ವುಡ್: ವಸಿಷ್ಠ ಸಿಂಹ ಸಾಫ್ಟ್​ವೇರ್ ಕಂಪನಿಯಲ್ಲಿ ಉದ್ಯೋಗಿ ಆಗಿದ್ದವರು. ಅಂಥ ಉದ್ಯೋಗ ಬಿಟ್ಟು ಅವರು ಸಿನಿಮಾರಂಗಕ್ಕೆ ಬಂದ ಕುರಿತು ಮುಕ್ತವಾಗಿ ಹೇಳಿಕೊಂಡರು. ‘ನಾನು ಸಿನಿಮಾ ಕ್ಷೇತ್ರಕ್ಕೆ ಬರಬೇಕು ಎಂದು ಉದ್ಯೋಗ ಬಿಟ್ಟಿರಲಿಲ್ಲ. ಆದರೆ ನನಗೆ ಆ ವಾತಾವರಣ ಅಷ್ಟು ಇಷ್ಟ ಆಗುತ್ತಿರಲಿಲ್ಲ.

    ಒಂದು ಚೌಕಟ್ಟಿಗಷ್ಟೇ ಸೀಮಿತವಾಗುತ್ತಿದ್ದೇನೆ ಅನಿಸುತ್ತಿತ್ತು. ಹೀಗಾಗಿ ಒಂದಷ್ಟು ದಿನ ಬೇರೆ ಏನಾದರೂ ಟ್ರೖೆ ಮಾಡೋಣ ಎಂದುಕೊಂಡು ಕೆಲಸ ಬಿಟ್ಟೆ. ಆ ಉದ್ಯೋಗಕ್ಕೆ ವಿದಾಯ ಹೇಳುವಾಗ ಗೊಂದಲವೂ ಇರಲಿಲ್ಲ, ಬಳಿಕ ಒಮ್ಮೆಯೂ ಪಶ್ಚಾತ್ತಾಪ ಕೂಡ ಆಗಲಿಲ್ಲ. ಕೆಲಸ ಬಿಟ್ಟಿದ್ದರಿಂದ ನನಗೆ ಒಳ್ಳೆಯದೇ ಆಯಿತು. ಹಾಗಂತ ಎಲ್ಲರ ಬದುಕಲ್ಲೂ ಹೀಗೇ ಆಗುತ್ತದೆ ಎನ್ನಲು ಸಾಧ್ಯವಿಲ್ಲ’ ಎನ್ನುವ ವಸಿಷ್ಠಗೆ ಕೆಲಸ ಬಿಟ್ಟಾಗ ಸಿನಿಮಾ ಕಡೆಗೆ ಬರುವ ಯೋಚನೆ ಕೂಡ ಇರಲಿಲ್ಲವಂತೆ. ಕೆಲಸ ಬಿಟ್ಟ ಏಳೆಂಟು ತಿಂಗಳ ಬಳಿಕ ಸಿನಿಮಾ ಆಫರ್ ಬಂತು ಎಂದರು.

    ಇದೆಲ್ಲ ಹೇಗಾಯಿತು?!: ವಸಿಷ್ಠ ಸಿನಿಮಾ ಹಾದಿ ಅಷ್ಟೇನೂ ಸುಲಭವಾಗಿ ಇರಲಿಲ್ಲ. ಅವರ ಪ್ರಪ್ರಥಮ ಸಿನಿಮಾ ಬಿಡುಗಡೆಯೇ ಆಗಲಿಲ್ಲ. ಆ ನಂತರ ತೆರೆ ಕಂಡ ಸಿನಿಮಾದಲ್ಲಿ ಯಾವ ಕ್ರೆಡಿಟ್ಟೂ ಸಿಗಲಿಲ್ಲ. ನಂತರದ ಸಿನಿಮಾಗಳಲ್ಲಿ ಸರಿಯಾದ ಸಂಭಾವನೆ ಕೂಡ ಸಿಕ್ಕಿರಲಿಲ್ಲವಂತೆ. ‘ಇದು ಕಡೇ ಪ್ರಯತ್ನ. ಇದರಲ್ಲಿ ಯಶಸ್ಸು ಸಿಗದಿದ್ದರೆ ಈ ಕ್ಷೇತ್ರ ಬಿಟ್ಟುಬಿಡೋಣ ಎಂದು ‘ರಾಜಾಹುಲಿ’ ಸಿನಿಮಾ ಮಾಡುವಾಗ ಅಂದುಕೊಂಡಿದ್ದೆ. ಅದೃಷ್ಟವಶಾತ್, ಆ ಚಿತ್ರ ಬಿಡುಗಡೆ ಆದ ತಕ್ಷಣ 2 ಆಫರ್ ಬಂತು. ನಂತರ ರೆಕಗ್ನಿಷನ್ ಸಿಗಲಾರಂಭಿಸಿತು’ ಎನ್ನುತ್ತಾರೆ ವಸಿಷ್ಠ. ‘ಈಗ ಕೈತುಂಬ ಅವಕಾಶಗಳಿವೆ. ಹೀರೋ ಆಗಿರುವ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಒಂದಷ್ಟು ಸಿನಿಮಾಗಳಲ್ಲಿ ಹೀರೋ ಆಗಿದ್ದೇನೆ. ಈಗ ಇವನ್ನೆಲ್ಲ ನೋಡಿದರೆ ಇದೆಲ್ಲ ಹೇಗಾಯಿತು ಅನಿಸುತ್ತದೆ’ ಎಂದು ಬೆರಗು ವ್ಯಕ್ತಪಡಿಸುತ್ತಾರೆ ವಸಿಷ್ಠ.

    ಕಲಿತ ಪಾಠ, ಕಂಡ ಕನಸು

    ವಸಿಷ್ಠ ಸಿಂಹ ಸಿನಿರಂಗದಲ್ಲಿ ಹೆಚ್ಚೂಕಡಿಮೆ 8 ವರ್ಷಗಳ ಹಾದಿ ಸವೆಸಿದ್ದಾರೆ. ಈ ಪ್ರಯಾಣ ಅವರಿಗೆ ಒಂದಷ್ಟು ಪಾಠಗಳನ್ನೂ ಕಲಿಸಿದೆ. ‘ಚಿತ್ರರಂಗ ಚೆನ್ನಾಗಿದೆ, ಇಲ್ಲಿ ಕರೆಕ್ಟ್ ಆಗಿರುವವರ ಜತೆಗೆ ಕೆಲಸ ಮಾಡಬೇಕಷ್ಟೇ. ಕರೆಕ್ಟ್ ಆಗಿರುವವರು ಯಾರು ಅಂತ ತಿಳಿದುಕೊಳ್ಳಬೇಕು.. ಆ ಬಗ್ಗೆ ತಿಳಿಯುತ್ತಲೇ ಇದ್ದೇನೆ. ಇನ್ನು ಏನೇ ಮಾಡಿದರೂ ಅದನ್ನು ಬದ್ಧತೆಯಿಂದ ಮಾಡಬೇಕು. ಒಂದಕ್ಕೇ ಬದ್ಧರಾಗಿ ಸಂಪೂರ್ಣ ತಯಾರಿ-ಶ್ರಮ ವಹಿಸಿದರೆ ಫಲ ಸಿಕ್ಕೇ ಸಿಗುತ್ತದೆ. ಎಲ್ಲದಕ್ಕಿಂತ ಹೆಚ್ಚು ನಾಳೆ ಏನು ಎಂದು ಯೋಚಿಸುವುದಕ್ಕಿಂತ ಇವತ್ತಿನ ಕೆಲಸವನ್ನು ಅಚ್ಚುಕಟ್ಟಾಗಿ ಗಮನ ಕೊಟ್ಟು ಮಾಡಬೇಕು ಎಂಬುದನ್ನು ಕಲಿತೆ’ ಎನ್ನುತ್ತಾರೆ ವಸಿಷ್ಠ. ತಾವು ಗಾಯಕನಾಗಿ ಬರಬೇಕು ಎಂದುಕೊಂಡಾಗ ಯಾರನ್ನು ಸಂರ್ಪಸಬೇಕು, ಹೇಗೆ ಸಂರ್ಪಸಬೇಕು ಎಂಬುದು ಗೊತ್ತಿರಲಿಲ್ಲ. ಹೀಗಾಗಿ ಉದಯೋನ್ಮುಖ ಗಾಯಕರು ಹಾಗೂ ಸಂಗೀತ ನಿರ್ದೇಶಕರಿಗೆ ಒಂದೊಳ್ಳೆಯ ವೇದಿಕೆ ಸೃಷ್ಟಿಸಬೇಕು ಎಂಬ ಕನಸನ್ನೂ ಕಾಣುತ್ತಿದ್ದಾರೆ ವಸಿಷ್ಠ.

    ಗಾಯಕನಾಗಲು ಬಂದು ನಟನಾದೆ

    ಅಸಲಿಗೆ, ವಸಿಷ್ಠ ಗಾಯಕನಾಗಬೇಕು ಎಂಬ ಆಸೆಯಿಂದ ಬೆಂಗಳೂರಿಗೆ ಬಂದಿದ್ದರು. ಹಂಸಲೇಖ ಅವರ ದೊಡ್ಡ ಅಭಿಮಾನಿ ಆಗಿರುವ ವಸಿಷ್ಠ, ಅವರ ತರಗತಿಗೆ ಸೇರಿದ್ದರು. 2-3 ತಿಂಗಳು ಅವರೊಂದಿಗಿದ್ದರು. ಅದಾದ ಮೇಲೆ ನಟನಾದ ಅವರು ಕೆಲವು ಗೀತೆಗಳನ್ನೂ ಹಾಡಿದ್ದಾರೆ. ಹಾಗಂತ ಮುಂದೆ ಹಾಡಲೇಬೇಕು ಎಂಬ ಆಸೆ ಅವರಿಗಿಲ್ಲ. ‘ನನಗೆ ಒಮ್ಮೆ ಆಡಿಯೋ ಕ್ಯಾಸೆಟ್ ಮೇಲೆ ಹೆಸರು ಬರಬೇಕು ಎಂಬ ಆಸೆ ಇತ್ತು. ಅದು ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಈಡೇರಿತು. ಇನ್ನುಮುಂದೆ ಯಾವುದಾದರೂ ಗೀತೆಗೆ ನನ್ನದೇ ದನಿ ಬೇಕು ಎಂಬ ಬೇಡಿಕೆ ಬಂದರೆ ಅಥವಾ ಅಂಥ ಚಾಲೆಂಜಿಂಗ್ ಅನಿಸುವಂತಹ ಗೀತೆ ಸಿಕ್ಕರಷ್ಟೇ ಹಾಡುತ್ತೇನೆ’ ಎನ್ನುತ್ತಾರೆ ಅವರು.

    ಮನೆಯಲ್ಲಿ ಒಪ್ಪಿರಲಿಲ್ಲ…

    ವಸಿಷ್ಠ ಸಿಂಹ ಸಿನಿಮಾ ಕ್ಷೇತ್ರಕ್ಕೆ ಬರುವ ಬಗ್ಗೆ ಮನೆಯವರ ಬಳಿ ಹೇಳಿದ್ದಾಗ ಅವರು ಒಪ್ಪಿರಲಿಲ್ಲ. ಸಂಪ್ರದಾಯಸ್ಥ ಮನೆತನವಾದ್ದರಿಂದ ಒಪ್ಪಿಸುವುದು ಸುಲಭವಲ್ಲ ಎಂದು ತಿಳಿದ ಅವರು ಮತ್ತೆ ಆ ವಿಷಯದ ಬಗ್ಗೆ ಪ್ರಸ್ತಾಪಿಸದೆ ಬೆಂಗಳೂರಿಗೆ ಬಂದಿದ್ದರು. ಪುತ್ರ ಕೆಲಸ ಬಿಟ್ಟು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವುದು ಮನೆಯವರಿಗೂ ಗೊತ್ತಾಗಿರಲಿಲ್ಲ. ‘ರಾಜಾಹುಲಿ’ ಸಿನಿಮಾ ಬಿಡುಗಡೆ ಆದಾಗ ಬೆಂಗಳೂರಿನಲ್ಲಿ ತಂದೆ ಯನ್ನು ಕರೆದುಕೊಂಡು ಹೋಗಿ ಸಿನಿಮಾ ತೋರಿಸಿದೆ. ನನ್ನ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಅಪ್ಪ ಏನೂ ಹೇಳಲಿಲ್ಲ. ಹಾಗೇ ಮುಂದುವರಿದೆ’ ಎನ್ನುತ್ತಾರೆ ವಸಿಷ್ಠ.

    | ರವಿಕಾಂತ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts