ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲೊಬ್ಬಮುಕೇಶ್ ಕುಮಾರ್ ಸಲ್ಲಿಸಿದ್ದ ದಯಾ ಅರ್ಜಿಯನ್ನು ಗೃಹ ಸಚಿವಾಲಯ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಕಳುಹಿಸಿಕೊಟ್ಟಿದೆ.
ದಯಾ ಅರ್ಜಿಯನ್ನು ತಿರಸ್ಕರಿಸಲು ಶಿಫಾರಸಿನೊಂದಿಗೆ ರಾಷ್ಟ್ರಪತಿ ಅವರಿಗೆ ಕಳುಹಿಸಲಾಗಿದೆ. ಮಂಗಳವಾರ ಸುಪ್ರೀಂಕೋರ್ಟ್ ಮುಕೇಶ್ ಕುಮಾರ್ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ದಯಾ ಅರ್ಜಿ ಸಲ್ಲಿಸಿದ್ದ.
ತಿಹಾರ್ ಜೈಲು ಆಡಳಿತದ ಪರ ನ್ಯಾಯವಾದಿ ರಾಹುಲ್ ಮೆಹ್ರಾ ಅಫಿಡವಿಟ್ ಸಲ್ಲಿಸಿದ್ದು, ರಾಷ್ಟ್ರಪತಿಗಳು ದಯಾ ಅರ್ಜಿಯನ್ನು ತಿರಸ್ಕರಿಸಿದ ಬಳಿಕವಷ್ಟೇ ಅಪರಾಧಿಗಳನ್ನು ಗಲ್ಲಿಗೇರಿಸುವುದು ಸಾಧ್ಯ. ಹಾಗಾಗಿ ಗಲ್ಲಿಗೇರಿಸುವ ಹೊಸ ದಿನಾಂಕವನ್ನು ತಿಳಿಸಬೇಕು ಎಂದು ಕೊರ್ಟ್ಗೆ ಮನವಿ ಮಾಡಿಕೊಂಡಿದ್ದರು.
ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಿರ್ಭಯಾ ತಾಯಿ, ಅವರಿಗೆ ಹಕ್ಕುಗಳಿರಬೇಕಾದರೆ, ನಮಗೂ ನ್ಯಾಯಕ್ಕಾಗಿ ಹೋರಾಡುವ ಹಕ್ಕಿದೆ. ನನ್ನ ಮಗಳು ಮೃತ ಪಟ್ಟ 7 ವರ್ಷದಿಂದ ನಾವು ನ್ಯಾಯವನ್ನೇ ಕೇಳುತ್ತಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್)