ನೀರವ್​ ಮೋದಿ ಬಂಧನದ ಯಶಸ್ಸು ಆತನನ್ನು ಹುಡುಕಿದ ಲಂಡನ್​ ಪತ್ರಕರ್ತನಿಗೆ ಸಲ್ಲಬೇಕು: ಮಮತಾ

ಕೋಲ್ಕತ: ಭಾರತದ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಲಂಡನ್​ಗೆ ಪರಾರಿಯಾಗಿರುವ ಉದ್ಯಮಿ ನೀರವ್​ ಮೋದಿ ಬಂಧನದ ಯಶಸ್ಸು ಆತನನ್ನು ಪತ್ತೆ ಹಚ್ಚಿದ ಬ್ರಿಟನ್​ ಪತ್ರಕರ್ತನಿಗೆ ಸಲ್ಲಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇದು ನಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಸಂದರ್ಭದಲ್ಲೇ ನೀರವ್​ ಮೋದಿ ಬಂಧನವಾಗಿದೆ. ಇದನ್ನು ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಮತ್ತು ನೀರವ್​ ಬಂಧನ ಮೊದಲೇ ನಿರ್ಧಾರವಾಗುತ್ತೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಜತೆಗೆ 7 ಹಂತದ ಮತದಾನದ ಮಧ್ಯೆಯೇ ಬಿಜೆಪಿ ಇಂತಹುದೇ ಕೆಲವು ಸ್ಫೋಟಕ ಸುದ್ದಿಗಳು ಬಹಿರಂಗಗೊಳಿಸಲು ನಿರ್ಧರಿಸಿದೆ ಎಂದು ಮಮತಾ ತಿಳಿಸಿದ್ದಾರೆ.

ಲಂಡನ್​ನಲ್ಲಿ ತಲೆಮರೆಸಿಕೊಂಡಿದ್ದ ನೀರವ್​ ಮೋದಿಯನ್ನು ಹುಡುಕಿದ್ದು, ಓರ್ವ ಪತ್ರಕರ್ತ. ಇಷ್ಟು ದಿನ ಸರ್ಕಾರದ ಗುಪ್ತಚರ ಸಂಸ್ಥೆಗಳು ಏನು ಮಾಡುತ್ತಿದ್ದವು ಎಂದು ಮಮತಾ ಪ್ರಶ್ನಿಸಿದ್ದಾರೆ.

ಜಾಮೀನು ನಿರಾಕರಣೆ

ಬಂಧನಕ್ಕೊಳಗಾಗಿರುವ ನೀರವ್​ ಮೋದಿಯನ್ನು ವೆಸ್ಟ್​ ಮಿನ್​ಸ್ಟರ್ ಜಿಲ್ಲಾ ನ್ಯಾಯಾಲಯ, 29ರ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ. ‘ಐದು ವರ್ಷದ ಮಗುವನ್ನು ನೋಡಿಕೊಳ್ಳಬೇಕಿರುವುದರಿಂದ 4.53 ಕೋಟಿ ರೂ. (5 ಲಕ್ಷ ಪೌಂಡ್) ಭದ್ರತಾ ಠೇವಣಿ ಇರಿಸಲೂ ಸಿದ್ಧ. ಜಾಮೀನು ನೀಡಿ’ ಎಂಬ ನೀರವ್ ಕೋರಿಕೆಯನ್ನು ತಳ್ಳಿಹಾಕಿದ ನ್ಯಾಯಾಧೀಶೆ ಮೇರಿ ಮಲ್ಲನ್, ಜಾಮೀನು ನೀಡಿದರೆ ಆರೋಪಿ ಕಾನೂನಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. (ಏಜೆನ್ಸೀಸ್​)

One Reply to “ನೀರವ್​ ಮೋದಿ ಬಂಧನದ ಯಶಸ್ಸು ಆತನನ್ನು ಹುಡುಕಿದ ಲಂಡನ್​ ಪತ್ರಕರ್ತನಿಗೆ ಸಲ್ಲಬೇಕು: ಮಮತಾ”

Comments are closed.