ಬಹುಕೋಟಿ ವಂಚಕ ನೀರವ್‌ ಮೋದಿಗೆ ಜಾಮೀನು ನಿರಾಕರಣೆ, ಮೇ 24ರವರೆಗೂ ಜೈಲೇ ಗತಿ

ಲಂಡನ್​/ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್‌ ಮೋದಿಗೆ ಸಂಕಷ್ಟ ಎದುರಾಗಿದ್ದು, ಮೇ 24ರ ವರೆಗೂ ನೀರವ್‌ ಮೋದಿ ಜೈಲಿನಲ್ಲೇ ಕಳೆಯುವಂತಾಗಿದೆ.

ಹಲವು ತಿಂಗಳುಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡು ಲಂಡನ್​ ಪೊಲೀಸರ ಬಲೆಗೆ ಬಿದ್ದಿರುವ ನೀರವ್​ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲಂಡನ್‌ನ ವೆಸ್ಟ್​ಮಿನ್ಸ್​​ಸ್ಟರ್​ ನ್ಯಾಯಾಲಯ ತಿರಸ್ಕರಿಸಿದ್ದು, ಮೂರನೇ ಬಾರಿಗೆ ಜಾಮೀನು ತಿರಸ್ಕೃತಗೊಂಡಿದೆ.

ಕಳೆದ ತಿಂಗಳಲ್ಲಿ ಬಂಧನಕ್ಕೊಳಗಾದಾಗಿನಿಂದ 48 ವರ್ಷದ ನೀರವ್‌ ಮೋದಿ ನೈಋತ್ಯ ಲಂಡನ್‌ನ ವ್ಯಾಂಡ್ಸ್‌ವರ್ಥ್‌ ಜೈಲಿನಲ್ಲಿದ್ದು, ವಿಡಿಯೋ ಕಾನ್ಫರೆನ್ಸ್‌ ಮೂಲಕ ಮ್ಯಾಜಿಸ್ಟ್ರೇಟ್‌ ಎಮ್ಮ ಅರ್ಬುತ್‌ನಾಟ್‌ ಎದುರಿಗೆ ಹಾಜರುಪಡಿಸಲಾಯಿತು. ಚುಟುಕು ವಿಚಾರಣೆ ನಡೆಸಿದ ನ್ಯಾಯಾಧೀಶರು, ನೀರವ್ ಮೋದಿ ಪೊಲೀಸ್ ಕಸ್ಟಡಿ ಅವಧಿಯನ್ನು ಮೇ 24ರ ವರೆಗೂ ವಿಸ್ತರಿಸಿದ್ದು, ಮೇ 30 ರಂದು ಸಂಪೂರ್ಣ ವಿಚಾರಣೆಗೆ ಆದೇಶಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣದಲ್ಲಿ ನೀರವ್ ಮೋದಿಯನ್ನು ಗಡಿಪಾರು ಮಾಡುವುದಕ್ಕೆ ಭಾರತದ ಜಾರಿ ನಿರ್ದೇಶನಾಲಯ ಮನವಿ ಮಾಡಿದ ಹಿನ್ನೆಲೆಯಲ್ಲಿ ಲಂಡನ್ ಕೋರ್ಟ್ ನೀರವ್ ಮೋದಿ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು. ಅದಾದ ಬಳಿಕ ಮಾ. 19ರಂದಷ್ಠೇ ನೀರವ್‌ ಮೋದಿಯನ್ನು ಸ್ಕಾಟ್‌ಲೆಂಡ್‌ ಯಾರ್ಡ್‌ ಅಧಿಕಾರಿಗಳು ಬಂಧಿಸಿದ್ದರು. (ಏಜೆನ್ಸೀಸ್)