ಆರೋಗ್ಯ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ

ಹಾವೇರಿ: ಗ್ರಾಮೀಣ ಮಹಿಳೆಯರ ಆರೋಗ್ಯ ಕಾಪಾಡುವ ಉದ್ದೇಶದಿಂದ ತಾಲೂಕಿನ ನೀರಲಗಿ ಗ್ರಾಮದಲ್ಲಿ ಸರ್ಕಾರ ನಿರ್ವಿುಸಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರವು ಆರೋಗ್ಯ ಇಲಾಖೆಯ ನಿರ್ಲಕ್ಷ್ಯಂದ ಪಾಳುಬಿದ್ದಿದೆ.

ಗ್ರಾಮೀಣ ಜನರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ತ್ವರಿತ ಚಿಕಿತ್ಸೆ ನೀಡುವ ಉದ್ದೇಶದಿಂದ ನೀರಲಗಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚ ದಲ್ಲಿ ನಿರ್ವಿುಸಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರವನ್ನು 2015ರ ಫೆಬ್ರವರಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ ಉದ್ಘಾಟಿಸಿದ್ದರು.

ಗ್ರಾಮಸ್ಥರಿಗೆ ಇಲ್ಲದಂತಾದ ಆರೋಗ್ಯ ಕೇಂದ್ರ: ಈ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕೇಂದ್ರ ಜನಸೇವೆಗೆ ದೊರೆತ ಬಳಿಕ ಒಬ್ಬ ನರ್ಸ್ ಇದ್ದರು. ಕೆಲ ತಿಂಗಳ ನಂತರ ವರ್ಗಾವಣೆಯಾದರು. ಅಂದು ಬಾಗಿಲು ಮುಚ್ಚಿದ ಕೇಂದ್ರ ಇದುವರೆಗೂ ತೆರೆದಿಲ್ಲ. ಮತ್ತೊಬ್ಬ ಆರೋಗ್ಯ ಸಹಾಯಕಿಯರ ನೇಮಕವೂ ಆಗಿಲ್ಲ.

ಗರ್ಭಿಣಿಯರ ತಪಾಸಣೆ ಹಾಗೂ ಸುಲಲಿತ ಹೆರಿಗೆ ಉದ್ದೇಶದಿಂದ ಸ್ಥಾಪಿಸಿರುವ ಈ ಕೇಂದ್ರವು ನಿಷ್ಪ್ರಯೋಜಕವಾಗಿದೆ. ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಬಾಣಂತಿಯರು, ವೃದ್ಧರು ಅನಾರೋಗ್ಯಕ್ಕೊಳಗಾದರೆ 5 ಕಿಮೀ ದೂರದ ಮೇವುಂಡಿ, 13 ಕಿಮೀ ದೂರದ ಗುತ್ತಲಕ್ಕೆ ಹೋಗಿ ಚಿಕಿತ್ಸೆ ಪಡೆಯುವ ಸ್ಥಿತಿಯಿದೆ.

ಆರೋಗ್ಯ ಇಲಾಖೆ ಈಗಲಾದರೂ ಎಚ್ಚೆತ್ತು ಈ ಉಪಕೇಂದ್ರದ ಬಾಗಿಲು ತೆರೆದು ಸಿಬ್ಬಂದಿ ನೇಮಿಸಿ ಸೇವೆಗೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಮಂಜುನಾಥ ಅಣ್ಣಿಗೇರಿ ಮತ್ತಿತರರು ಎಚ್ಚರಿಸಿದ್ದಾರೆ.

ರೋಗಿಗಳ ಆರೋಗ್ಯ ಸುಧಾರಣೆಗೆ ಉಪಯೋಗವಾಗಬೇಕಿದ್ದ ಈ ಕೇಂದ್ರವು ರಾತ್ರಿ ಕುಡುಕರ ಹಾಗೂ ಅನೈತಿಕ ಚಟುವಟಿಕೆಗಳಿಗೆ ತಾಣವಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥ ನಿಂಗಪ್ಪ ಚೌಡಮ್ಮನವರ.

ನೀರಲಗಿಯಲ್ಲಿ ಒಬ್ಬ ಎಎನ್​ಎಂ ಇದ್ದರು. ಹೀಗಾಗಿ, ಕಟ್ಟಡ ನಿರ್ವಿುಸಲಾಯಿತು. ಅವರು ವರ್ಗವಾಗಿ ಹೋದರು. ಮತ್ತೆ ರೆಗ್ಯುಲರ್ ಸ್ಟಾಫ್ ಇಲ್ಲದೇ ಸ್ಥಗಿತವಾಗಿದೆ. ತಾಲೂಕಿನಲ್ಲಿ 19ಎಎನ್​ಎಂ ಪೋಸ್ಟ್ ಖಾಲಿಯಿವೆ. ಈಗ ಕೌನ್ಸೆಲಿಂಗ್ ನಡೆದಿದೆ. ಅಲ್ಲಿ ಯಾರಾದರೂ ಬಂದರೆ ನೀರಲಗಿ ಕೇಂದ್ರಕ್ಕೆ ನೇಮಿಸಲಾಗುವುದು.

– ಡಾ. ಪ್ರಭಾಕರ ಕುಂದೂರ. ತಾಲೂಕು ಆರೋಗ್ಯಾಧಿಕಾರಿ