22ರಂದು ನಿಪ್ಪಾಣಿ ತಾಲೂಕು ಸಾಹಿತ್ಯ ಸಮ್ಮೇಳನ

ನಿಪ್ಪಾಣಿ: ತಾಲೂಕಿನ ಬೆನಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲಾ ಆವರಣದಲ್ಲಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಜ.22ರಂದು ಜರುಗಲಿದೆ. ಬೆಳಗ್ಗೆ 7.30 ಗಂಟೆಗೆ ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮತ್ತು ಕಸಾಪ ತಾಲೂಕು ಅಧ್ಯಕ್ಷೆ ವಿದ್ಯಾವತಿ ಜನವಾಡೆ ಪರಿಷತ್ ಧ್ವಜಾರೋಹಣ ನೆರವೇರಿಸುವರು.

8 ಗಂಟೆಗೆ ಗ್ರಾಮದ ಬಸ್ ತಂಗುದಾಣದ ಬಳಿ ಕನ್ನಡಾಂಬೆ ಶ್ರೀ ಭುವನೇಶ್ವರಿ ದೇವಿ ಪೂಜೆ ಹಾಗೂ ಮೆರವಣಿಗೆ ನಡೆಯುವುದು. ಗ್ರಾ.ಪಂ. ಅಧ್ಯಕ್ಷೆ ದಿವ್ಯಾ ಸಾಂಗಾವೆ ಉದ್ಘಾಟಿಸುವರು. ಬಸ್ ತಂಗುದಾಣದಿಂದ ಆರಂಭಿಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗೆ (ಹುತಾತ್ಮ ಪ್ರಕಾಶ ಜಾಧವ ನುಡಿಮಾರ್ಗ) ಮೆರವಣಿಗೆ ನಡೆಯಲಿದ್ದು, ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ.

11 ಗಂಟೆಗೆ ಶಾಸಕಿ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಂಗರಾಜ ವನದುರ್ಗ ಸಮ್ಮೇಳನ ಉದ್ಘಾಟಿಸುವರು. ಆಡಿ-ಹಂದಿಗುಂದ ಗಿರಿಮಠದ ಶಿವಾನಂದ ಸ್ವಾಮೀಜಿ, ಚಿಂಚಣಿಯ ಸಿದ್ಧಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಗೀತ ಕಲಾವಿದ ಬಿ.ಎಸ್.ಮಾಲಗಾರ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ಬೆಳಗಾವಿಯ ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಆಶಯ ನುಡಿ ಹೇಳುವರು.

ಮಧ್ಯಾಹ್ನ 12.30 ಗಂಟೆಗೆ ಗೋಷ್ಠಿ ಜರುಗಲಿದ್ದು, ಸಾಹಿತಿ ಡಾ.ವಿ.ಎಸ್.ಮಾಳಿ ಕನ್ನಡ ಕಟ್ಟುವಲ್ಲಿ ಮಾಧ್ಯಮಗಳ ಪಾತ್ರ ಮತ್ತು ಚಿಕ್ಕೋಡಿಯ ಸಾಹಿತಿ ಡಾ. ಪಿ.ಜಿ. ಕೆಂಪಣ್ಣವರ ಕನ್ನಡ ನಾಡು ನುಡಿಗೆ ನಿಪ್ಪಾಣಿ ತಾಲೂಕಿನ ಕೊಡುಗೆಗಳು ವಿಷಯಗಳ ಕುರಿತು ಉಪನ್ಯಾಸ ನೀಡುವರು. ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಗೋಷ್ಠಿಯಲ್ಲಿ ಬೆಳಗಾವಿಯ ಸಾಹಿತಿ ಡಾ.ಶಿರೀಷ ಜೋಶಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ.ಕೃಷ್ಣಾ ಆರ್.ಮೆಳವಂಕಿ ಆಶಯ ನುಡಿ ಹೇಳುವರು.

ಮಧ್ಯಾಹ್ನ 2 ಗಂಟೆಗೆ ಕವಿಗೋಷ್ಠಿಯಲ್ಲಿ ಸ್ಥಳೀಯ ಮುರುಘೇಂದ್ರಮಠದ ಬಸವ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಪ್ರೊ.ವಿಜಯ ಧಾರವಾಡ ಅಧ್ಯಕ್ಷತೆ ವಹಿಸುವರು. ಬೆಳಗಾವಿಯ ಸಾಹಿತಿ ಡಾ.ಎಚ್.ಬಿ. ಕೋಲಕಾರ ಆಶಯನುಡಿ ಹೇಳುವರು.

ಮಧ್ಯಾಹ್ನ 3.30 ಗಂಟೆಗೆ ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಚಿಕ್ಕೋಡಿಯ ಸಾಹಿತಿ ಡಾ. ದಯಾನಂದ ನೂಲಿ ಅಧ್ಯಕ್ಷತೆ ವಹಿಸುವರು. ಡಾ.ಬಿ.ಎಂ.ಹಿರೇಮಠ, ಶ್ರೀಪಾದ ಕುಂಬಾರ, ಮಾರುತಿ ಕೊಣ್ಣೂರಿ, ಎಸ್.ಎಂ.ಪುರಾಣಿಕಮಠ ಸಂವಾದದಲ್ಲಿ ಪಾಲ್ಗೊಳ್ಳುವರು.

ಸಂಜೆ 4.30 ಗಂಟೆಗೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಗೋಕಾಕನ ಸಾಹಿತಿ ಡಾ.ಸಿ.ಕೆ.ನಾವಲಗಿ ಅಧ್ಯಕ್ಷತೆ ವಹಿಸುವರು. ಆಡಿಯ ವಿರಕ್ತಮಠದ ಸಿದ್ಧೇಶ್ವರ ಸ್ವಾಮೀಜಿ, ಖಡಕಲಾಟದ ಅಪ್ಪನವರಮಠದ ಶಿವಬಸವ ಸ್ವಾಮೀಜಿ ಮತ್ತು ಸ್ಥಳೀಯ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಸಮಾರೋಪ ನುಡಿ ಹಾಗೂ ಸಾಹಿತಿ ಡಾ.ಯ.ರು.ಪಾಟೀಲ ಆಶಯ ನುಡಿ ಆಡಲಿದ್ದಾರೆ. ಸಾಧಕರಿಗೆ ಸನ್ಮಾನ ನಡೆಯಲಿದ್ದು, ಶೈಕ್ಷಣಿಕ ಸಾಧಕ ಡಾ. ಸಿದ್ಧಗೌಡ ಪಾಟೀಲ, ಅಬ್ಯಾಕಸ್ ಸಾಧಕಿ ಆದಿತಿ ಚೌಗುಲೆ, ಅನುವಾದಕಿ ಡಾ. ಉಮಾ ಕುಲಕರ್ಣಿ ಮತ್ತು ಕಲಾವಿದೆ ಯಮನವ್ವ ಕಲಾಚಂದ್ರ ಅವರನ್ನು ಸನ್ಮಾನಿಸಲಾಗುವುದು.

ಸಂಜೆ 6 ಗಂಟೆಗೆ ಸ್ಥಳೀಯ ಶಾಲೆಯ ಮಕ್ಕಳು ಮತ್ತು ಕಲಾವಿದರಿಂದ ಸಾಂಸ್ಕೃತಿಕ ಸೌರಭ, ರಾತ್ರಿ 7.30 ಗಂಟೆಗೆ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರಿಂದ ನಗೆ ಹಬ್ಬ ಕಾರ್ಯಕ್ರಮ ಜರುಗಲಿದೆ.