ಮಂಡ್ಯ ಜನತೆ ಬಗ್ಗೆ ದರ್ಶನ್​ ಮಾತನಾಡಿದ್ದಾರೆನ್ನಲಾದ 9 ವರ್ಷದ ಹಿಂದಿನ ಆಡಿಯೋ ಕ್ಲಿಪ್​ ವೈರಲ್​

ಬೆಂಗಳೂರು/ಮಂಡ್ಯ: ನಟಿ ಸುಮಲತಾ ಅಂಬರೀಷ್​ ಅವರಿಗೆ ನಟರಾದ ದರ್ಶನ್​ ಹಾಗೂ ಯಶ್​ ಬಹಿರಂಗವಾಗಿ ಬೆಂಬಲ ಘೋಷಿಸಿದಾಗಿನಿಂದ ನಟರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದರ್ಶನ್​ ಧ್ವನಿ ಎನ್ನಲಾದ ಆಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2009ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​​ ವಿರುದ್ಧ ಅಂಬರೀಷ್​ ಸೋತಾಗ ಮಂಡ್ಯ ಜನತೆಯ ಬಗ್ಗೆ ದರ್ಶನ್​ ಮಾತನಾಡಿರುವ ಆಡಿಯೋ ಎನ್ನಲಾಗಿದೆ. ಆಡಿಯೋದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ಮಂಡ್ಯ ಜನರ ಬಗ್ಗೆ ಕೀಳು ಭಾಷೆಯಲ್ಲಿ ಜರಿದಿದ್ದಾರೆ ಎಂದು ಹೇಳಲಾಗಿದೆ.

ಸುಮಲತಾರಿಗೆ ಬೆಂಬಲ ನೀಡುವ ಮೂಲಕ ಮಂಡ್ಯ ರಾಜಕೀಯಕ್ಕೆ ಪ್ರವೇಶ ಮಾಡಿದ ಯಶ್​ ಮತ್ತು ದರ್ಶನ್​ ವಿರುದ್ಧ ಮೈತ್ರಿ ಪಕ್ಷದ ನಾಯಕರು ಗರಂ ಆಗಿದ್ದು, ಉಭಯ ನಟರ ವಿರುದ್ಧ ವಾಕ್ಸಮರವೇ ನಡೆಯುತ್ತಿದೆ. ಈ ಮಧ್ಯೆ ನಟ ದರ್ಶನ್​ ಮನೆ ಮೇಲೆ ಕಲ್ಲು ತೂರಾಟ ಪ್ರಕರಣವೂ ನಡೆದಿದೆ. ಜತೆಗೆ ಸಿಎಂ ಕುಮಾರಸ್ವಾಮಿ ನಟರನ್ನು ಕಳ್ಳೆತ್ತುಗಳು ಎನ್ನುವ ಮೂಲಕ ಲೇವಡಿಯೂ ಮಾಡಿದ್ದಾರೆ.

ಎಫ್​ಐಆರ್​ ದಾಖಲು
ದರ್ಶನ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್​ ಮ್ಯಾನೇಜರ್ ಶ್ರೀನಿವಾಸ್ ಎಂಬುವರು ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಶನಿವಾರ ಮಧ್ಯರಾತ್ರಿ 12:54 ಗಂಟೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯ ಕಿಟಕಿ ಗ್ಲಾಸ್ ಹೊಡೆದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ನಡೆದ ದಿನ ದರ್ಶನ ‘ಒಡೆಯ’ ಸಿನಿಮಾ ಶೂಟಿಂಗ್​ ನಿಮಿತ್ತ ಹೈದಾರಾಬಾದ್ ನಲ್ಲಿ ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)