ಗೋದ್ರಾ ಚಿತ್ರಕ್ಕೆ ಹಾಡೊಂದೇ ಬಾಕಿ

ಬೆಂಗಳೂರು: ನಟ ಸತೀಶ್ ‘ನೀನಾಸಂ’ ಮತ್ತು ನಟಿ ಶ್ರದ್ಧಾ ಶ್ರೀನಾಥ್ ಜತೆಯಾಗಿ ಅಭಿನಯಿಸುತ್ತಿರುವ ‘ಗೋದ್ರಾ’ ಸಿನಿಮಾ ಬಗ್ಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಶೀರ್ಷಿಕೆ ಕಾರಣಕ್ಕಾಗಿಯೇ ಕೌತುಕ ಕೆರಳಿಸಿರುವ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ ನಂದೀಶ್.

ಆರಂಭದಲ್ಲಿ ಹೊರಬಂದ ಒಂದು ಪೋಸ್ಟರ್​ನಲ್ಲಿ ಸತೀಶ್ ಮುಸುಕು ಧರಿಸಿ, ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಶ್ರದ್ಧಾ ಮತ್ತು ಸತೀಶ್ ಜತೆಯಾಗಿರುವ ಯಾವುದೇ ಫೋಟೋಗಳನ್ನು ನಿರ್ದೇಶಕರು ಹಂಚಿಕೊಂಡಿರಲಿಲ್ಲ. ಈಗ ಚಿತ್ರತಂಡದ ಕಡೆಯಿಂದ ಹೊಸ ಫೋಟೋಗಳು ಲಭ್ಯವಾಗಿದ್ದು, ಅದರಲ್ಲಿ ಶ್ರದ್ಧಾ-ಸತೀಶ್ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಆಂಧ್ರದ ಕರ್ನಲ್​ನಲ್ಲಿ ಒಂದು ಹಾಡನ್ನು ‘ಗೋದ್ರಾ’ ಬಳಗ ಸೆರೆ ಹಿಡಿದಿತ್ತು. ಆ ಹಾಡಿನಲ್ಲಿ ಶ್ರದ್ಧಾ-ಸತೀಶ್ ಗೆಟಪ್ ಹೇಗಿರಲಿದೆ ಎಂಬುದಕ್ಕೆ ಈ ಫೋಟೋಗಳಲ್ಲಿ ಉತ್ತರ ಸಿಕ್ಕಿದೆ. ‘ಕರ್ನಲ್​ನಲ್ಲಿ ಚಿತ್ರೀಕರಿಸಿದ ಹಾಡು ಒಂದು ಡಾನ್ಸಿಂಗ್ ನಂಬರ್. ಇಡೀ ಚಿತ್ರದಲ್ಲಿ ಹಲವು ಗೆಟಪ್​ಗಳು ಬರಲಿವೆ. ಅದರಲ್ಲಿ ಇದು ಕೂಡ ಒಂದು. ವಯಸ್ಸಿಗೆ ತಕ್ಕಂತೆ ಲುಕ್ ಬದಲಾಗಲಿದೆ’ ಎನ್ನುತ್ತಾರೆ ಸತೀಶ್. ಈಗಾಗಲೇ ಚಿತ್ರಕ್ಕೆ ಮಾತಿನ ಭಾಗದ ದೃಶ್ಯಗಳ ಶೂಟಿಂಗ್ ಮುಕ್ತಾಯವಾಗಿದೆ. ಇನ್ನೊಂದು ಹಾಡನ್ನು ಚಿತ್ರೀಕರಿಸಿದರೆ ಶೂಟಿಂಗ್ ಪೂರ್ಣಗೊಳ್ಳಲಿದೆ.

ಜೂನ್ ಮೊದಲ ವಾರದಲ್ಲಿ ಆ ಹಾಡನ್ನು ಕಂಠೀರದ ಸ್ಟುಡಿಯೋದಲ್ಲಿ ಚಿತ್ರೀಕರಿಸಲು ಪ್ಲಾ್ಯನ್ ಮಾಡಿಕೊಳ್ಳಲಾಗುತ್ತಿದೆ. ಮೂಲಗಳ ಪ್ರಕಾರ, ಆ ಗೀತೆ ತುಂಬ ಅದ್ದೂರಿ ಮತ್ತು ಕಲರ್​ಫುಲ್ ಆಗಿ ಮೂಡಿಬರಲಿದೆಯಂತೆ. ಅಂದಹಾಗೆ, ಈ ಚಿತ್ರದ ಬಿಡುಗಡೆ ಕೊಂಚ ವಿಳಂಬವಾಗಿರುವುದು ನಿಜ. ಯಾಕೆ? ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆಯಂತೆ. ಗ್ರಾಫಿಕ್ಸ್ ಕೆಲಸಗಳು ಜಾಸ್ತಿ ಇವೆ. ಹಾಗಾಗಿ, ತುಂಬ ಕಾಳಜಿ ವಹಿಸಿ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ.