ಬಿಳಿಗಿರಿರಂಗನಬೆಟ್ಟದಲ್ಲಿ ನೀಲಗಿರಿ ಲಂಗೂರ್ ದರ್ಶನ

ಯಳಂದೂರು: ತಮಿಳುನಾಡಿನ ಉದಕಮಂಡಲದ ಬೆಟ್ಟಗಳಲ್ಲಿರುವ ನೀಲಗಿರಿ ಲಂಗೂರ್ ತಾಲೂಕಿನ ಬಿಳಿಗಿರಿರಂಗನಬೆಟ್ಟದ ಹುಲಿ ರಕ್ಷಿತಾರಣ್ಯದಲ್ಲಿ ದರ್ಶನ ನೀಡಿದ್ದು ಪ್ರಾಣಿ ಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.

ಪಶ್ಚಿಮ ಹಾಗೂ ಪೂರ್ವಘಟ್ಟಗಳನ್ನು ಸೇರಿಸುವ ಈ ಸಂರಕ್ಷಿತಾರಣ್ಯದಲ್ಲಿ ಸಾಮಾನ್ಯ ಲಂಗೂರ್ ಅಥವಾ ಹನುಮಾನ್ ಲಂಗೂರ್‌ಗಳ ಗುಂಪು ಆಗಾಗ ಕಾಣಿಸುತ್ತವೆ. ಆದರೆ ಇತ್ತೀಚೆಗೆ ತಮಿಳುನಾಡಿನ ನೀಲಗಿರಿ, ಕೊಡೆಯಾರ್ ಕೇರಳ ಹಾಗೂ ಕರ್ನಾಟಕದ ಕೊಡಗಿನಲ್ಲಿ ಕಾಣಿಸಿಕೊಳ್ಳುವ ನೀಲಗಿರಿ ಲಂಗೂರ್ ದರ್ಶನ ನೀಡಿದೆ. ಶುಕ್ರವಾರ ಬೆಟ್ಟಕ್ಕೆ ತೆರಳಿದ್ದ ಪ್ರವಾಸಿಗ ಮನು ಅವರು ಇದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ್ದಾರೆ.

ಸಾಮಾನ್ಯವಾಗಿ ಕಂಡುಬರುವ ಲಂಗೂರ್‌ಗಳಲ್ಲಿ ಮುಖ ಮಾತ್ರ ಕಪ್ಪು ಬಣ್ಣದಿಂದ ಕೂಡಿರುತ್ತದೆ. ತಲೆಯ ಸುತ್ತ ಹಾಗೂ ಮೈಮೇಲೆ ಇರುವ ಕೂದಲುಗಳು ಕಂದು ಬಣ್ಣದ್ದಾಗಿರುತ್ತವೆ. ಆದರೆ ನೀಲಗಿರಿ ಲಂಗೂರ್‌ಗಳ ಬಣ್ಣ ವಿಭಿನ್ನವಾಗಿರುತ್ತದೆ. ಇದರ ಮುಖ ಹಾಗೂ ಮೈ ಮೇಲಿನ ಕೂದಲುಗಳು ಕಪ್ಪು ಬಣ್ಣದ್ದಾಗಿದ್ದು ಇದರ ತಲೆಯ ಸುತ್ತ ಇರುವ ಕೂದಲುಗಳು ಕಂದು ಬಣ್ಣದ್ದಾಗಿರುತ್ತವೆ .

ಸೋಲಿಗರ ಭಾಷೆಯಲ್ಲಿ ಲಂಗೂರ್ ಅನ್ನು ಮುಸುಗ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇವು ಗುಂಪಾಗಿ ವಾಸಿಸುವ ಪ್ರಾಣಿಗಳಾಗಿವೆ. ಬಿಆರ್‌ಟಿಯಲ್ಲಿ ಇಂತಹ ಅನೇಕ ಅಪರೂಪದ ಹಾಗೂ ವಿಶಿಷ್ಟ ಜೀವಸಂಕುಲಗಳಿರುವುದು ಸಂತಸ ತಂದಿದೆ ಎಂದು ಉರಗ ಪ್ರೇಮಿ ಬಿಆರ್‌ಟಿಯ ಸ್ನೇಕ್ ಸುಂದರ್ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *