ಶ್ವೇತಭವನದತ್ತ ಚಿತ್ತ

| ಪ್ರದ್ಯುಮ್ನ

ಅದು 2014ನೇ ಸಾಲಿನ ಸಂದರ್ಭ. ಪ್ರತಿಷ್ಠಿತ ಮ್ಯಾಗಜೀನ್ ‘ನ್ಯೂಸ್ ವೀಕ್’ನ ಮುಖಪುಟದಲ್ಲಿ ನಿಕ್ಕಿ ಹ್ಯಾಲೆ ರಾರಾಜಿಸಿದಾಗ ಅವರನ್ನು ‘ಅಮೆರಿಕ ರಾಜನೀತಿಯ ಹೊಸ ಚಹರೆ’ ಎಂದೇ ವಿಶ್ಲೇಷಿಸಲಾಯಿತು. ಅಷ್ಟು ಹೊತ್ತಿಗಾಗಲೇ ದಕ್ಷಿಣ ಕರೋಲಿನಾದ ರಾಜ್ಯಪಾಲರಾಗಿ ಸಾಕಷ್ಟು ಹೆಸರು ಮಾಡಿದ್ದ, ಸಾಮಾಜಿಕ ಕಾರ್ಯಗಳಿಂದ ಸುದ್ದಿಯಾಗಿದ್ದ ನಿಕ್ಕಿ, ಟ್ರಂಪ್ ವಿರೋಧಿಬಣದಲ್ಲಿ ಗುರುತಿಸಿಕೊಂಡವರು. ಆದರೆ, ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಟ್ರಂಪ್ ವಿಚಾರಗಳತ್ತ ವಾಲಿದರು. 2016ರ ಅಂತ್ಯಕ್ಕೆ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿ ನಿಕ್ಕಿ ಹೆಸರು ಘೋಷಣೆಯಾದಾಗ ಮತ್ತೆ ಸಂಚಲನ. ಭಾರತೀಯ ಮೂಲದ ಮಹಿಳೆಯೊಬ್ಬರು ಅಮೆರಿಕ ಆಡಳಿತದಲ್ಲಿ ಕ್ಯಾಬಿನೆಟ್ ರ್ಯಾಂಕ್​ನ ಹುದ್ದೆ ಪಡೆದಿದ್ದು ಇದೇ ಮೊದಲಾಗಿತ್ತು. ಭಾರತೀಯ ಮೂಲದ ಎರಡನೇ ಗವರ್ನರ್, ಮೊದಲ ಮಹಿಳಾ ಗವರ್ನರ್ ಆಗಿ ಗಮನ ಸೆಳೆದಿದ್ದ ನಿಕ್ಕಿ ವಿಶ್ವಸಂಸ್ಥೆ ಪ್ರವೇಶಿಸಿದ ಬಳಿಕ ಕಾರ್ಯವ್ಯಾಪ್ತಿ ಮತ್ತಷ್ಟು ವಿಶಾಲವಾಯಿತು. ಭಾರತ-ಅಮೆರಿಕ ನಡುವಿನ ಸಂಬಂಧಗಳನ್ನು ದೃಢಗೊಳಿಸಲು ಆಸಕ್ತಿ ತೋರಿದ ನಿಕ್ಕಿ ಈ ನಿಟ್ಟಿನಲ್ಲಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದವರೊಂದಿಗೆ ಆಗಾಗ ಮಾತುಕತೆ ನಡೆಸಿದ್ದುಂಟು. ಅಲ್ಲದೆ, 2017ರ ಜನವರಿಯಲ್ಲಿ ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡಾಗ ‘ಬಹುಸಂಸ್ಕೃತಿಯ, ಬಹುಭಾಷೆಗಳ ದೇಶದಿಂದ ಬಂದವಳು ಎಂದು ನನ್ನನ್ನು ಗುರುತಿಸಲಾಗುತ್ತಿದೆ, ಇದು ನನಗೆ ಖುಷಿಯ ವಿಚಾರ’ ಎಂದು ಹೇಳುವ ಮೂಲಕ ತಮ್ಮ ಭಾರತೀಯ ಮೂಲದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಡೊನಾಲ್ಡ್ ಟ್ರಂಪ್ ಆಪ್ತವಲಯದಲ್ಲಿ ಗುರುತಿಸಲ್ಪಡುವ ನಿಕ್ಕಿ ಇತ್ತೀಚೆಗೆ ರಾಯಭಾರಿ ಸ್ಥಾನಕ್ಕೆ ದಿಢೀರ್ ಎಂದು ರಾಜೀನಾಮೆ ಘೋಷಿಸಿದಾಗ ರಾಜಕೀಯ ಚರ್ಚೆ ಮತ್ತೆ ಚುರುಕು ಪಡೆಯಿತು. ‘ಸಾಕಷ್ಟು ಖ್ಯಾತಿ, ಪ್ರಭಾವ ಹೊಂದಿರುವ ಅವರು 2020ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದಕ್ಕಾಗಿ ತಯಾರಿ ನಡೆಸಲು ಈ ಕ್ರಮ ಕೈಗೊಂಡಿದ್ದಾರೆ’ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದವು. ಇದು ಟ್ರಂಪ್ ಬೆಂಬಲಿಗರ ವಲಯದಲ್ಲಿ ಆತಂಕ ಮೂಡಿಸಿದ್ದು ನಿಜ. ಆದರೆ, ‘2020ರ ಅಧ್ಯಕ್ಷೀಯ ಚುನಾವಣೆಗೆ ನಿಕ್ಕಿ ಸ್ಪರ್ಧಿಸಲ್ಲ, ಟ್ರಂಪ್ ಪರವಾಗಿ ಪ್ರಚಾರ ಮಾಡಲಿದ್ದಾರೆ’ ಎಂಬ ಅವರ ಆಪ್ತರ ಟ್ವೀಟ್ ಚರ್ಚೆಯನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ದಿತು. ‘ನಿಕ್ಕಿ ತುಂಬ ಮೇಧಾವಿ, ಜಾಣೆ. ಅವರು 2020ರಲ್ಲಿ ಟ್ರಂಪ್​ರನ್ನು ವಿರೋಧಿಸುವ ತಪು್ಪನಿರ್ಣಯ ಕೈಗೊಳ್ಳುವುದಿಲ್ಲ. ಆದರೆ, 2024ರ ಚುನಾವಣೆಗೆ ಅವರು ಪ್ರಬಲ ಸ್ಪರ್ಧಿಯಾಗಿ ಹೊಮ್ಮಬಲ್ಲರು’ ಎಂದು ಅಮೆರಿಕನ್ ಪತ್ರಿಕೆಗಳು ವಿಶ್ಲೇಷಿಸಿದವು. ಅಂದರೆ, ಮುಂಬರುವ ಚುನಾವಣೆಯಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿ, ಆ ಬಳಿಕದ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗುವತ್ತ ಜಾಣನಡೆ ಇರಿಸಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ಘೋಷಿಸಿದ ಬಳಿಕ ಅವರು ಟ್ರಂಪ್​ರನ್ನು ಭೇಟಿ ಮಾಡಿದರು. ಆಗ ನಿಕ್ಕಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು ‘ನಿಕ್ಕಿ ನನ್ನ ಸ್ನೇಹಿತೆ. ಅವರು ಖಾಸಗಿ ರಂಗವನ್ನೂ ಪ್ರವೇಶಿಸಬಹುದು. ಅಲ್ಲಿ ಅವರು ಭಾರಿ ಸಂಪತ್ತು, ದುಡ್ಡನ್ನು ಸಂಪಾದಿಸಬಹುದು. ಅವರಿಗೆ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ, ವರ್ಷಾಂತ್ಯದವರೆಗೂ ಅದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ’ ಎಂದರು. ಈ ಎಲ್ಲ ಶ್ಲಾಘನೆ ಮತ್ತು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಿಕ್ಕಿ ಮುಂದಿನ ದಿನಗಳಲ್ಲಿ ವೃತ್ತಿ/ರಾಜಕೀಯ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಅಮೆರಿಕ ರಾಯಭಾರಿ ಆಗಿದ್ದ ಸಂದರ್ಭದಲ್ಲಿ ನಿಕ್ಕಿ ಪಾಕಿಸ್ತಾನಕ್ಕೆ ಭಯೋತ್ಪಾದನೆ ವಿಚಾರ ಸಂಬಂಧವಾಗಿ ಹಲವು ಬಾರಿ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದರು. ಅಲ್ಲದೆ, ಟ್ರಂಪ್ ಆಡಳಿತಕ್ಕೆ ತಮ್ಮ ನಿಲುವುಗಳನ್ನು ಖಡಕ್ಕಾಗಿಯೇ ತಿಳಿಸುತ್ತಿದ್ದರು.

ಅಮೆರಿಕನ್ ಸಿಖ್ ಕುಟುಂಬಕ್ಕೆ ಸೇರಿರುವ ನಿಕ್ಕಿ ಜನಿಸಿದ್ದು ದಕ್ಷಿಣ ಕರೋಲಿನಾದಲ್ಲಿ (1972ರ ಜನವರಿ 20). ಇವರ ಮೊದಲಿನ ಹೆಸರು ನಿಮ್ರತಾ ನಿಕ್ಕಿ ರಂಧಾವಾ. ತಂದೆ ಅಜಿತ್ ಸಿಂಗ್ ರಂಧಾವಾ, ತಾಯಿ ರಾಜ್ ಕೌರ್. ನಿಕ್ಕಿಗೆ ಇಬ್ಬರು ಸಹೋದರರು, ಓರ್ವ ಸಹೋದರಿ ಇದ್ದಾರೆ. ಗಂಡ, ಇಬ್ಬರು ಮಕ್ಕಳ ಸಂಸಾರ ಅವರದ್ದು. ತಾಯಿ ಸ್ಥಾಪಿಸಿದ ಕಂಪನಿಯಲ್ಲೇ ಮೊದಲು ಕೆಲಸ ಆರಂಭಿಸಿದರು. ಆಸ್ಪತ್ರೆ ನಿರ್ವಣಕ್ಕೆ ದೇಣಿಗೆ ಸಂಗ್ರಹ ಸೇರಿದಂತೆ ಹಲವು ಸಾಮಾಜಿಕ ಅಭಿಯಾನಗಳಲ್ಲಿ ತೊಡಗಿಸಿಕೊಂಡರು. ಇವರ ಪೂರ್ವಜರು ಭಾರತದ ಪಂಜಾಬ್​ನ ಅಮೃತ್​ಸರ್ ಜಿಲ್ಲೆಯವರು.

‘ಕಳೆದೊಂದು ದಶಕದಿಂದ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಿರುವೆ. ಈಗ ಸ್ವಲ್ಪ ದಿನಗಳ ಕಾಲ ಕೊಂಚ ವಿರಾಮ ಮಾಡಲು ಬಯಸುತ್ತೇನೆ. ತಲೆಯಲ್ಲಿ ಹತ್ತಾರು ಯೋಚನೆಗಳಿವೆ. ಮುಂದೇನು ಮಾಡುತ್ತೇನೆ ಎಂದು ನಿಮಗೆಲ್ಲ ತಿಳಿಸುವೆ’ ಎಂದು ಹೇಳಿರುವ ನಿಕ್ಕಿ ಚಿತ್ತ ಶ್ವೇತಭವನದತ್ತ ನೆಟ್ಟಿದೆ ಎಂಬುದು ಅವರ ಆತ್ಮೀಯರ ಅಂಬೋಣ.

ಪ್ರತಿಕ್ರಿಯಿಸಿ: [email protected]