ಮಂಡ್ಯದಲ್ಲಿ ನಿಖಿಲ್ ಮನೆ ಮಾಡುತ್ತಾರಾ?

ಮಂಡ್ಯ: ಲೋಕಸಭಾ ಚುನಾವಣೆಗೂ ಮುನ್ನ ಇಬ್ಬರು ಅಭ್ಯರ್ಥಿಗಳು ಮಂಡ್ಯದಲ್ಲಿ ಮನೆ ಮಾಡುವುದಾಗಿ ಹೇಳಿದ್ದು, ಸುಮಲತಾ ಬಾಡಿಗೆ ಮನೆ ಮಾಡಿದರೆ, ನಿಖಿಲ್ ಜಾಗ ಹುಡುಕಾಟ ನಡೆಸಿದ್ದರು.

ಈಗ ಸುಮಲತಾ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಸೋತು ಹತಾಶರಾಗಿರುವ ನಿಖಿಲ್ ನಡೆಯೇನು? ಜಮೀನು ಖರೀದಿಸಿ ತೋಟದ ಮನೆ ಮಾಡಿ, ವ್ಯವಸಾಯದಲ್ಲಿ ತೊಡಗಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗಳು ಆರಂಭವಾಗಿವೆ.

ಚುನಾವಣೆ ಗೆಲ್ಲಲಿ, ಸೋಲಲಿ ಮಂಡ್ಯದ ಸಂಬಂಧ ಬಿಡಲ್ಲ ಎಂದಿದ್ದ ನಿಖಿಲ್, ಜಿಲ್ಲೆಯಲ್ಲಿ ಉಳಿದು ಜನರ ಜತೆ ಬೆರೆತು ಭವಿಷ್ಯ ರಾಜಕೀಯಕ್ಕೆ ಬುನಾದಿ ಹಾಕುವರೇ? ಅಥವಾ ಜಿಲ್ಲೆಯ ಸಹವಾಸ ಬೇಡವೆಂದು ತವರಿನತ್ತ ಮುಖ ಮಾಡುವರೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಅಂತೆಯೇ, ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ ಮಂಡ್ಯದಲ್ಲೇ ಇರುವುದಾಗಿ ಹೇಳಿದ್ದ ಸುಮಲತಾ ಸ್ವಂತ ಮನೆ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು. ಚುನಾವಣೆ ವೇಳೆಗೆ ಮನೆ ನಿರ್ಮಾಣ ಅಸಾಧ್ಯ ಎಂಬ ಕಾರಣದಿಂದ ಪತಿ ಅಂಬರೀಷ್ ಬಾಡಿಗೆಗೆ ಪಡೆದಿದ್ದ ಮನೆಯನ್ನೇ ಬಾಡಿಗೆಗೆ ಪಡೆದಿದ್ದಾರೆ.

ಸದ್ಯ ಬೆಂಗಳೂರಿನ ಮನೆಯನ್ನು ನವೀಕರಣಗೊಳಿಸಿ ಗೃಹಪ್ರವೇಶ ಮಾಡಿರುವ ಅವರು ಮಂಡ್ಯದಲ್ಲೂ ಸ್ವಂತ ಮನೆ ಮಾಡುವರೇ ಅಥವಾ ಬಾಡಿಗೆ ಮನೆಯಲ್ಲೇ ಉಳಿಯುವರೆ? ಜತೆಗೆ ಮಂಡ್ಯದಲ್ಲಿ ವಾರಕ್ಕೆ ಅಥವಾ ತಿಂಗಳಿಗೆ ಎಷ್ಟು ದಿನ ಸಿಗುತ್ತಾರೆ. ಜನರಿಗೆ ಸಿಗುವ ದಿನಗಳ ಬಗ್ಗೆ ಜನರಿಗೆ ಹೇಗೆ ಮಾಹಿತಿ ಸಿಗಲಿದೆ ಎಂಬ ಚರ್ಚೆಗಳು ಆರಂಭವಾಗಿವೆ.

ಒಂದು ದಿನವೂ ಇರದ ಅಂಬಿ
ಅಂಬರೀಷ್ ಶಾಸಕರಾದಾಗ ಬಾಡಿಗೆ ಮನೆ ಮಾಡಿದ್ದರು. ಆದರೆ, ಆ ಮನೆಯಲ್ಲಿ ಒಂದು ದಿನವೂ ಅವರು ಉಳಿಯಲಿಲ್ಲ. ಜತೆಗೆ ಸರ್ಕಾರಿ ಕಟ್ಟಡದಲ್ಲಿ ನೀಡಿದ್ದ ಕಚೇರಿಯನ್ನು ಉದ್ಘಾಟಿಸಿದ್ದು ಬಿಟ್ಟರೆ, ಅಲ್ಲಿ ಒಮ್ಮೆಯೂ ಕಾಣಿಸಿಕೊಳ್ಳದೆ ದಾಖಲೆ ನಿರ್ಮಿಸಿದ್ದರು.
ಅವರ ಆಪ್ತ ಅಮರಾವತಿ ಚಂದ್ರಶೇಖರ್ ಮನೆಯೇ ಅವರಿಗೆ ಕಚೇರಿಯಾಗಿತ್ತು.

ಅಧಿಕಾರಿಗಳನ್ನು ಅಲ್ಲಿಗೆ ಕರೆಸಿಕೊಂಡು ಸಭೆ ಮಾಡಿದ್ದು ಉಂಟು. ಈ ಕಾರಣದಿಂದ ಅವರ ಬಗ್ಗೆ ಜಿಲ್ಲೆಯ ಜನರಲ್ಲಿ ಅಸಹನೆ ಮೂಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಅಂಬರೀಷ್ ಸ್ಪರ್ಧಿಸದಿರಲು ನಿರ್ಧರಿಸಿದ್ದು, ಜನರು ಈ ಬಾರಿ ಕೈ ಹಿಡಿಯುವುದಿಲ್ಲ ಎಂಬ ಕಾರಣದಿಂದಲೇ ಎಂಬುದು ಬಹಿರಂಗ ಗುಟ್ಟು.

ಹಾಗಾಗಿ ಸುಮಲತಾ ಜನರಿಗೆ ಹೇಗೆ ಸಿಗುತ್ತಾರೆ. ಯಾವ ರೀತಿ ಅವರನ್ನು ಸಂಪರ್ಕಿಸಬೇಕೆಂದು ಜನರಲ್ಲಿ ಕುತೂಹಲ ಹುಟ್ಟುಹಾಕಿದೆ. ಇದಕ್ಕೆಲ್ಲ ಸುಮಲತಾ ಯಾವ ರೀತಿ ವ್ಯವಸ್ಥೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮನೆ ಮಾಡಿದ್ದ ರಮ್ಯಾ
2013ರ ಲೋಕಸಭಾ ಉಪ ಚುನಾವಣೆಯಲ್ಲಿ ಜಯಗಳಿಸಿದ ಮಾಜಿ ಸಂಸದೆ ರಮ್ಯಾ ವಿದ್ಯಾನಗರದಲ್ಲಿನ ಸಾದತ್ ಆಲಿಖಾನ್ ಅವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು.

ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ಮನೆ ಖಾಲಿ ಬಿಟ್ಟರು. ಆಗ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಕ್ಷಣ ಎಚ್ಚೆತ್ತ ರಮ್ಯಾ ಮತ್ತೆ ಅದೆ ಮನೆ ಬಾಡಿಗೆಗೆ ಪಡೆದು ವಾಸ್ತು ಪ್ರಕಾರ ನವೀಕರಣ ಮಾಡಿಸಿದ್ದರು.

ಪ್ರಧಾನಿ ಮೋದಿಯವರು ನೋಟ್ ಬ್ಯಾನ್ ಮಾಡಿದಾಗ ಸೇರಿ ಹಲವು ಸಂದರ್ಭಗಳಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದ ಅವರು ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಜತೆಗೆ ಆತ್ಮಹತ್ಯೆಗೆ ಶರಣಾದ ರೈತರ ಮನೆಗೆ ತೆರಳಿ ವೈಯಕ್ತಿಕವಾಗಿ ಪರಿಹಾರ ನೀಡಿ ಉತ್ತಮ ಸಂಪರ್ಕ ಸಾಧಿಸಿದ್ದರು.

ಆದರೆ, ಅಂಬರೀಷ್ ಮೃತಪಟ್ಟಾಗ ಅಂತಿಮ ದರ್ಶನಕ್ಕೆ ಬರಲಿಲ್ಲ. ಸೌಜನ್ಯಕ್ಕೂ ಸಂತಾಪ ಹೇಳಲಿಲ್ಲ. ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಯಿತು. ಕೆಲದಿನಗಳ ಬಳಿಕ ತಮ್ಮ ಕಾಲಿಗೆ ಶಸ್ತ್ರಚಿಕಿತ್ಸೆ ಆಗಿರುವುದಾಗಿ ಕೇವಲ ಕಾಲಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಈ ಕಾರಣದಿಂದ ಬರಲಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಆದರೂ ಜಿಲ್ಲೆಯ ಜನತೆ ಮಾತ್ರವಲ್ಲ, ಲೋಕಸಭಾ ಚುನಾವಣೆಯಲ್ಲಿ ಅವರ ಪರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿದ್ದವರೇ ಹೀನಾಯವಾಗಿ ರಮ್ಯಾರನ್ನ ಟೀಕಿಸಿದರು.

ಇದಾದ ಕೆಲವೇ ದಿನಗಳಲ್ಲಿ ರಾತ್ರೋರಾತ್ರಿ ಮನೆಯಲ್ಲಿದ್ದ ವಸ್ತುಗಳನ್ನು ಲಾರಿಗಳಿಗೆ ತುಂಬಿಸಿಕೊಂಡು ಖಾಲಿ ಮಾಡಿದರು. ಅಲ್ಲಿಗೆ ಜಿಲ್ಲೆಯ ಜತೆಗಿನ ರಮ್ಯಾರ ಸಂಬಂಧ ಕಟ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

One Reply to “ಮಂಡ್ಯದಲ್ಲಿ ನಿಖಿಲ್ ಮನೆ ಮಾಡುತ್ತಾರಾ?”

Leave a Reply

Your email address will not be published. Required fields are marked *