ಮಂಡ್ಯದಲ್ಲಿ ಮನೆ ಮಾಡಿದ ನಿಖಿಲ್‌, ಹೊಸ ಮನೆಗೆ ಹೆಸರಿಡುವುದೇನು ಗೊತ್ತಾ? ಸುಮಲತಾ ಸಖತ್‌ ಪವರ್‌ಫುಲ್‌ ಅಂದಿದ್ಯಾಕೆ?

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನನುಭವಿಸಿದ ಬಳಿಕ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಸೋತರೂ ಕ್ಷೇತ್ರದಿಂದ ದೂರ ಇರುವುದಿಲ್ಲ. ಅಲ್ಲೇ ಮನೆ ಮಾಡಿಕೊಂಡು ಜನರ ಜತೆ ಇರುತ್ತೇನೆ ಎಂದಿದ್ದರು. ಅದರಂತೆ ಇದೀಗ ಮಂಡ್ಯದಿಂದ ಒಂದು ಕಿ.ಮೀ. ದೂರದಲ್ಲೇ ನಿಖಿಲ್‌ ತೋಟ ಖರೀದಿಸಿದ್ದಾರೆ.

ಈ ಕುರಿತು ಮಳವಳ್ಳಿಯಲ್ಲಿ ಮಾತನಾಡಿರುವ ಅವರು, ಮಂಡ್ಯ ಸಿಟಿಗೆ ಒಂದು ಕಿ.ಮೀ. ದೂರದಲ್ಲೇ ತೋಟ ಖರೀದಿ ಮಾಡಿದ್ದೇನೆ. ‘ನಿಮ್ಮ ಮನೆ’ ಎಂದು ಮನೆಗೆ ಹೆಸರಿಡುತ್ತೇನೆ. ನಾನು ಮನೆಯಲ್ಲಿ ಇಲ್ಲ ಅಂದ್ರೂ ಯಾರು ಬೇಕಾದರೂ ಮನೆಗೆ ಬರಬಹುದು. 15 ದಿನದೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದರು.

ಮಂಡ್ಯ ಪ್ರವಾಸದ ಬಗ್ಗೆ ಜೆಡಿಎಸ್‌ ವರಿಷ್ಠರ ಜತೆ ಚರ್ಚೆಮಾಡಿದ್ದೇನೆ. ನನಗೆ ಮತಚಲಾಯಿಸಿದ ಮತದಾರರಿಗೆ ಧನ್ಯವಾದಗಳು. ಚುನಾವಣೆ ಫಲಿತಾಂಶ ಬಂದ ನಂತರ ನಿಖಿಲ್ ಸೋತಿದ್ರಿಂದ ಧೃತಿಗೆಟ್ಟು ಕುಡಿದು ಗಲಾಟೆ ಮಾಡಿದ್ದಾರೆಂದು ಯಾವುದೋ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆದಿದ್ದರು. ಆದರೆ ಆ ರೀತಿ ಬರೆಯುವ ಮುನ್ನ ಆ‌ ಮಾಹಿತಿ ಸರಿ ಇದೆಯಾ ಇಲ್ಲವಾ ಎನ್ನುವುದನ್ನು ಪರಿಶೀಲನೆ ಮಾಡಿ. ಈ ಸಂಗತಿ ನನಗೆ ಬಹಳ ನೋವುಂಟು ಮಾಡಿದೆ. ನನ್ನ ಧೃತಿಗೆಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ರಾಜಕೀಯಪ ಪಾಠ ಹೇಳಿಸಿಕೊಳ್ಳುತ್ತಿದ್ದೇನೆ

ನಾನು ಪ್ರತಿನಿತ್ಯ ಕುಮಾರಸ್ವಾಮಿ, ದೇವೆಗೌಡರ ಜೊತೆ ಚರ್ಚೆ ಮಾಡುತ್ತಿದ್ದೇನೆ. ಅವರ ರಾಜಕೀಯ ಅನುಭವವನ್ನು ನನಗೆ ಹೇಳಿಕೊಡುತ್ತಿದ್ದಾರೆ. ನನಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟ ಜಿಲ್ಲೆಯ ಶಾಸಕರು, ಕಾರ್ಯಕರ್ತರಿಗೆ ಧನ್ಯವಾದಗಳು. ನಾನು ಜೆಡಿಎಸ್‌ ಕಾರ್ಯಕರ್ತರ ಪರವಾಗಿ ಸಾಯುವವರೆಗೂ ಇರುತ್ತೇನೆ ಎಂದಿದ್ದೆ. ಆ ಮಾತು ಚುನಾವಣೆಗೆ ಮಾತ್ರ ಸೀಮಿತ ಅಲ್ಲ. ಮನೆಬಳಿ ಸಿಎಂ ನೋಡಲು ರಾಜ್ಯದ ಹಲವೆಡೆ ಇಂದು ಜನರು ಬರುತ್ತಾರೆ. ಕೆಲಸದ ಒತ್ತಡದಿಂದ ಎಲ್ಲರನ್ನೂ ಸಿಎಂ ಭೇಟಿ ಮಾಡಲು ಸಾಧ್ಯವಿಲ್ಲ. ಆ ವೇಳೆ ಆ ಜನರ ಸಮಸ್ಯೆಗೆ ಮನೆ ಬಳಿ ಸ್ಪಂದಿಸುತ್ತಿದ್ದೇನೆ ಎಂದು ತಿಳಿಸಿದರು.

ಕಾಲೇಜು ದಿನಗಳಲ್ಲಿ ನಾನು ಕುಡಿಯುತ್ತಿದ್ದೆ. ಎಂಟು ವರ್ಷ ಆಯ್ತು ನಾನು ಕುಡಿಯುವುದು ಬಿಟ್ಟು. ಆರೋಗ್ಯದ ದೃಷ್ಟಿಯಿಂದ, ಸಾರ್ವಜನಿಕ ಬದುಕಲ್ಲಿ ಇರುವುದರಿಂದ ನಾನು ಕುಡಿಯುವುದನ್ನು ಬಿಟ್ಟಿದ್ದೇನೆ. ದೇವೇಗೌಡರ ಮುಂದೆ ನಿಂತು ಮಾತನಾಡುವ ಧೈರ್ಯ ನನಗಿಲ್ಲ. ಹೀಗಿರುವಾಗ ನಾನು ಕುಡಿದು ಅವರ ಮುಂದೆ ನಿಲ್ಲಲು ಸಾಧ್ಯಾನಾ? ರಾಜ್ಯಾಧ್ಯಕ್ಷ ಸ್ಥಾನ, ಯುವಘಟಕಕ್ಕೆ ಅಧ್ಯಕ್ಷ ಸ್ಥಾನ ಪಡೆಯಲು ನನಗಿನ್ನು ಅನುಭವದ ಅವಶ್ಯಕತೆ ಇದೆ. ನಾನು ಕಾರ್ಯಕರ್ತನಾಗೆ ಜೆಡಿಎಸ್‌ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.

ಸುಮಲತಾ ವಿರುದ್ಧ ವ್ಯಂಗ್ಯ

ಚಲುವಣ್ಣನಿಗೆ ಇವತ್ತು ಕಾವೇರಿ ನೀರಿನ ಬಗ್ಗೆ ಕಾಳಜಿ ಬಂದಿದೆ. ಆರಿಸಿ ಕಳಿಸಿರುವ ಸಂಸದರು ಕಾವೇರಿ ವಿಚಾರವಾಗಿ ಹೋರಾಟ ಮಾಡುತ್ತಾರೆ. ಬಿಜೆಪಿ ಬೆಂಬಲ ನೂತನ ಸಂಸದರಿಗಿದೆ. ಸಖತ್ ಶಕ್ತಿಶಾಲಿ ಅವರು. ನಾವೆಲ್ಲ ಯಾರು? ನಾವೆಲ್ಲ ಸಣ್ಣವರು. ಹೋರಾಟ ಮಾಡುತ್ತಾರೆ, ಜನರ ನಿರೀಕ್ಷೆಗೆ ತಕ್ಕಂತೆ ಅವರು ಕೆಲಸ ಮಾಡುತ್ತಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *