ಸಮೀಕ್ಷೆಗಳ ವರದಿಯಲ್ಲಿ ನಿಖಿಲ್ ಕುಮಾರಸ್ವಾಮಿಗೆ​ ಗೆಲುವು, ಸುಮಲತಾ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

ಮಂಡ್ಯ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚು ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರಸ್ವಾಮಿ ಗೆಲ್ಲಲಿದ್ದಾರೆ ಎಂಬ ಮತದಾನೋತ್ತರ ಸಮೀಕ್ಷೆಗಳಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದ್ದರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

ಇತ್ತೀಚೆಗೆ ಗುಪ್ತಚರ ಇಲಾಖೆ ನಿಖಿಲ್ ವಿರುದ್ಧವಾಗಿ ಸಮೀಕ್ಷೆ ವರದಿ ನೀಡಿದ್ದರಿಂದ ಸಿಎಂ ಎಚ್​.ಡಿ.ಕುಮಾರಸ್ವಾಮಿ ಆತಂಕಕ್ಕೀಡಾಗಿದ್ದರು. ಈಗ ಎಕ್ಸಿಟ್​ ಪೋಲ್​ ಸಮೀಕ್ಷೆ ಜೆಡಿಎಸ್​ನವರಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. ಆದರೆ ಸುಮಲತಾ ಅಂಬರೀಷ್​ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದವರಿಗೆ ಸಮೀಕ್ಷೆ ಬೇಸರ ಮೂಡಿಸಿದೆ.

ಟೀ ಅಂಗಡಿ ಸೇರಿ ಜನ ಸೇರುವ ಸ್ಥಳಗಳಲ್ಲಿ ಮತದಾನೋತ್ತರ ಸಮೀಕ್ಷೆ ಕುರಿತು ಚರ್ಚೆ ನಡೆಯುತ್ತಿದ್ದು, ಕೆಲವರು ಸಮೀಕ್ಷೆ ಸುಳ್ಳಾಗುತ್ತದೆ ಎಂದರೆ, ಮತ್ತೆ ಕೆಲವರು ಸತ್ಯವಾಗಲಿದೆ ಎಂದು ವಾದ ಮಾಡುತ್ತಿದ್ದಾರೆ. ಇನ್ನು ಕೆಲ ದಿನಗಳಿಂದ ತಣ್ಣಗಾಗಿದ್ದ ನಿಖಿಲ್ ಬೆಂಬಲಿಗರು ಮತ್ತೆ ಬೆಟ್ಟಿಂಗ್​ನಲ್ಲಿ ಮುನ್ನಲೆಗೆ ಬಂದಿದ್ದು ರಾಜಕೀಯ ಚರ್ಚೆ ವೇಳೆ ಬೆಟ್ಟಿಂಗ್​ಗೆ ಆಹ್ವಾನ ನೀಡುತ್ತಿದ್ದಾರೆ ಎನ್ನಲಾಗಿದೆ.

ಸಮೀಕ್ಷೆಗಳಿಂದ ಸುಮಲತಾ ಬೆಂಬಲಿಗರಲ್ಲಿ ಆತಂಕ ಹೆಚ್ಚಾಗಿದ್ದು, ಸುಮಲತಾ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಕೆ.ಶೆಟ್ಟಿಹಳ್ಳಿಯ ಈಶ್ವರ-ಪಾರ್ವತಿ ದೇವಾಲಯದಲ್ಲಿ ಅಂಬರೀಷ್ ಆಪ್ತ ಎಸ್.ಎಲ್ ಲಿಂಗರಾಜು ನೇತೃತ್ವದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು, ಮೇ 23ರ ಚುನಾವಣೆ ಫಲಿತಾಂಶದಲ್ಲಿ ಸುಮಲತ ಜಯಗಳಿಸಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

One Reply to “ಸಮೀಕ್ಷೆಗಳ ವರದಿಯಲ್ಲಿ ನಿಖಿಲ್ ಕುಮಾರಸ್ವಾಮಿಗೆ​ ಗೆಲುವು, ಸುಮಲತಾ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ”

Leave a Reply

Your email address will not be published. Required fields are marked *