ಮದ್ದೂರು ವಡೆ ಇದ್ದಹಾಗೆ ಮಂಡ್ಯದ ಗಂಡು ಅಂಬರೀಷ್​, ಮಂಡ್ಯದ ಗೌಡ್ತಿ ಸುಮಕ್ಕ: ಯಶ್‌ ತಿರುಗೇಟು

ಮಂಡ್ಯ: ಎಲ್ಲೇ ಹೋದರೂ ಜಗತ್ತಿನಲ್ಲಿ ಮದ್ದೂರು ವಡೆ ಫೇಮಸ್. ಫೈವ್‌ಸ್ಟಾರ್ ಹೋಟೆಗಳಲ್ಲೂ ಮದ್ದೂರು ವಡೆ ಎಂದು ಬೋರ್ಡ್ ಹಾಕಿದ್ದಾರೆ. ಕಾರಣ ನಮ್ಮತನ ಅದು ಅಂತ. ಅದೇ ರೀತಿ ಅಂಬರೀಷಣ್ಣ ಮಂಡ್ಯದಿಂದ ಇಂಡಿಯಾಗೆ ಫೇಮಸ್ಸು ಎಂದು ನಟ ಯಶ್‌ ತಿಳಿಸಿದ್ದಾರೆ.

ಫಿಜ್ಜಾ ಬರ್ಗರ್‌ಗೆ ಆಸೆ ಬಿದ್ರೆ ನಮ್ಮ ಕಥೆ ಮುಗೀತು. ಮದ್ದೂರು ವಡೆ ನಮ್ಮ ಸ್ವಾಭಿಮಾನ. ಅದನ್ನು ಮರೆಯಬಾರದು. ಅದೇ ರೀತಿ ಮಂಡ್ಯದ ಗಂಡು ಅಂಬರೀಷ್‌, ಮಂಡ್ಯದ ಗೌಡ್ತಿ ಸುಮಕ್ಕ. ಸುಮಲತಾ ಗೌಡ್ತಿನೇ ಅಲ್ಲ, ಹೊರಗಿನವರು ಎಂದು ಬಿಂಬಿಸಲು ಹೋದರೆ ಜನ ಮೂರ್ಖರಲ್ಲ. ಮನಸ್ಸು ಶುದ್ಧಿಯಾಗಿದ್ದಾಗ ಅಂಥ ವಾಯ್ಸ್ ಬರುತ್ತದೆ ಎಂದು ಹೇಳಿದರು.

ಧೈರ್ಯ ಮಾಡಿ‌ ಹೆಣ್ಣು ಮಗಳೊಬ್ಬಳು ಚುನಾವಣೆಗೆ ಬಂದಿದ್ದಾರೆ ಅವರನ್ನು ಬೆಂಬಲಿಸಿ. ಇದು ರಾಜ್ಯದ ಚುನಾವಣೆಯಲ್ಲ, ಕೇಂದ್ರದ ಚುನಾವಣೆ. ಕೇಂದ್ರದ ಯೋಜನೆಗಳನ್ನು ಭ್ರಷ್ಟಾಚಾರವಿಲ್ಲದೆ ನಿಮಗೆ ತಲುಪಿಸುತ್ತಾರೆ. ಉದ್ದೇಶಪೂರ್ವಕವಾಗಿ ನಾಲ್ಕು ಜನ ಸುಮಲತಾ ಎಂಬ ಮಹಿಳೆಯರನ್ನು ಕಣಕ್ಕಿಳಿಸಿದ್ದಾರೆ. ಯಾರು ಗೊಂದಲಕ್ಕೊಳಗಾಗದೆ ಕ್ರಮಸಂಖ್ಯೆ 20ಕ್ಕೆ ಮತ ಹಾಕಿ ಎಂದರು.

ಕ್ರಮಸಂಖ್ಯೆ 20 ಎಂದಾಗ ಕುಮಾರಸ್ವಾಮಿಗೆ ಆಪತ್ತು ಎಂದು ಅಭಿಮಾನಿಗಳು ಕೂಗಿದರು. ಆಗ ಹಾಗೆಲ್ಲ ಅನ್ನಬೇಡಿ ಎಂದು‌ ಯಶ್‌ ಮನವಿ ಮಾಡಿದರು.

ಯಶ್‌ಗೆ ಬೃಹತ್‌ ಸೇಬಿನ ಹಾರ ಹಾಕಿ ಸ್ವಾಗತ

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಅಂಗವಾಗಿ ಸುಮಲತಾ ಪರ ಮದ್ದೂರು ವಿಧಾನಸಭಾ ಕ್ಷೇತ್ರದ ಮಲ್ಲನಕುಪ್ಪೆ ಗ್ರಾಮದಲ್ಲಿ ರೋಡ್‌ ಶೋ ಆರಂಭಿಸಿದರು. ಈ ವೇಳೆ ಯಶ್‌ಗೆ ಸೇಬಿನ ಹಾರ ಹಾಕಿ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಒಂದೂವರೆ ಕ್ವಿಂಟಾಲ್ ಸೇಬಿನ ಹಾರ ಹಾಕಿದರು. ಯಶ್‌ಗೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು. (ದಿಗ್ವಿಜಯ ನ್ಯೂಸ್)