ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಗೆಲುವಿಗೆ ದೇವರಿಗೆ ಮೇಕೆ ಬಿಟ್ಟು ಹರಕೆ ಹೊತ್ತುಕೊಳ್ಳುತ್ತಿರುವ ಅಭಿಮಾನಿಗಳು

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ಮಂಡ್ಯ ಕ್ಷೇತ್ರ ಈಗ ಮತ್ತೆ ಎಲ್ಲರೂ ಇತ್ತ ನೋಡುವಂತೆ ಮಾಡುತ್ತಿದೆ. ಮತದಾನೋತ್ತರ ಸಮೀಕ್ಷೆ ಮೈತ್ರಿ ಅಭ್ಯರ್ಥಿ ನಿಖಿಲ್​ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದು, ನಿಖಿಲ್​ ಕುಮಾರಸ್ವಾಮಿ ಗೆಲುವಿಗೆ ಅಭಿಮಾನಿಗಳು ಮೇಕೆ ಬಿಟ್ಟು ಹರಕೆ ಹೊತ್ತುಕೊಳ್ಳುತ್ತಿದ್ದಾರೆ.

ನಿನ್ನೆ ಸುಮಲತಾ ಅಂಬರೀಷ್​ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದರು. ಇಂದು ನಿಖಿಲ್​ಕುಮಾರಸ್ವಾಮಿ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದೇವಾಲಯದಲ್ಲಿ ನಿಖಿಲ್​ ಗೆಲುವಿಗಾಗಿ ಅಭಿಮಾನಿಗಳಿಂದ ಉರುಳು ಸೇವೆ, ಆರತಿ ಉಕ್ಕಡದ ಅಹಲ್ಯದೇವಿಗೆ ಪೂಜೆ, ಪ್ರಾರ್ಥನೆ ನಡೆಯುತ್ತಿದ್ದು, ಮೇಕೆಗಳನ್ನು ದೇವರಿಗೆ ಬಿಟ್ಟು ಹರಕೆ ಹೊತ್ತುಕೊಳ್ಳುತ್ತಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ಆಧಾರದಲ್ಲಿ ನಿಖಿಲ್​ಕುಮಾರಸ್ವಾಮಿ ಅಭಿಮಾನಿಗಳು ತಮ್ಮದೇ ಗೆಲುವು ಅನ್ನುತ್ತಿದ್ದು, ಇನ್ನೊಂದೆಡೆ ಸುಮಲತಾ ಅಭಿಮಾನಿಗಳು ಗೆಲುವು ತಮ್ಮದೆನ್ನುತ್ತಿದ್ದಾರೆ. ಇಲ್ಲಿ ಬೆಟ್ಟಿಂಗ್​ ಭರಾಟೆಯೂ ಜೋರಾಗಿಯೇ ನಡೆಯುತ್ತಿದೆ ಎನ್ನಲಾಗಿದ್ದು, ಈ ನಡುವೆ ಇಬ್ಬರ ಕಡೆಯ ಅಭಿಮಾನಿಗಳು ಹರಕೆಯ ಮೊರೆ ಹೋಗುತ್ತಿದ್ದಾರೆ.

ನಿನ್ನೆ ಕೆ.ಶೆಟ್ಟಹಳ್ಳಿಯಲ್ಲಿರುವ ಶಿವ ದೇಗುಲದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಅಭಿಮಾನಿಗಳಿಂದ ಹರಕೆ, ಪೂಜೆ, ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *