ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ನಿಶ್ಚಿತಾರ್ಥ ಫೆ.10ಕ್ಕೆ ನಿಗದಿಯಾಗಿದೆ.
ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳಾದ ರೇವತಿ ಅವರನ್ನು ನಿಖಿಲ್ ವರಿಸಲಿದ್ದಾರೆ. ಮೊನ್ನೆಯಷ್ಟೇ ಹೆಣ್ಣು ನೋಡುವ ಶಾಸ್ತ್ರದ ನಿಮಿತ್ತ ಹುಡುಗಿಯ ಮನೆಗೆ ನಿಖಿಲ್ ಕುಟುಂಬ ಭೇಟಿ ನೀಡಿ ಶಾಸ್ತ್ರವನ್ನು ಮುಗಿಸಿದ್ದರು. ಅದಕ್ಕೆ ಪ್ರತಿಯಾಗಿ ಇಂದು ನಿಖಿಲ್ ಮನೆಗೆ ರೇವತಿ ಕುಟುಂಬ ಭೇಟಿ ನೀಡಿ, ಶಾಸ್ತ್ರ, ಸಂಪ್ರದಾಯ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, ಏಪ್ರಿಲ್ ತಿಂಗಳಲ್ಲಿ ಮದುವೆ ನಡೆಯುವ ಸಾಧ್ಯತೆಯಿದೆ.ಇಂದು ಎರಡು ಕುಟುಂಬಗಳ ಆಪ್ತರು ಭಾಗಿಯಾಗಿ ಮಾತುಕತೆ ನಡೆಸಿದೆವು. ಫೆ.10 ರಂದು ನಿಶ್ಚಿತಾರ್ಥ ನಡೆಯಲಿದೆ. ಉಳಿದಂತೆ ಮದುವೆ ಸಮಾರಂಭ ಏಪ್ರಿಲ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದರು.
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಮ್ಮ ಕುಟುಂಬದ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದಾರೆ. ನಿನ್ನೆ ನಾನು ರೇವತಿಯವರನ್ನು ಭೇಟಿಯಾಗಿದ್ದೆ. ಅವರು ಕೂಡ ತುಂಬಾ ಒಳ್ಳೆಯವರು. ನಮ್ಮದು ಸಂಪೂರ್ಣ ಆರೇಂಜ್ ಮ್ಯಾರೇಜ್. ರೇವತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಕನಸು ಇದೆ. ನಮ್ಮನ್ನು ಪ್ರೀತಿಸುವ ಜನ ಮದುವೆಗೆ ಬಂದು ಊಟ ಮಾಡಿಕೊಂಡು ಹೋದ್ರೆ ಅದೇ ಖುಷಿ ಎಂದರು.
ಇವತ್ತಿನ ಕಾಲದಲ್ಲಿ ಹೆಂಗಸರು ಅಂದ್ರೆ ಮನೆಯಲ್ಲಿ ಕುಳಿತುಕೊಳ್ಳುವುದಲ್ಲ. ಅಡುಗೆ ಮನೆಯಲ್ಲಿ ಇರೋದಲ್ಲ. ನಮಗಿಂತ ಹೆಚ್ಚು ಬುದ್ದಿ ಶಾಲಿಗಳಾಗಿರುತ್ತಾರೆ. ಹಾಗಾಗಿ ಎಲ್ಲ ವಿಚಾರದಲ್ಲೂ ನಾನು ಅವರಿಗೆ ಸಪೋರ್ಟ್ ಮಾಡುತ್ತೇನೆ ಎಂದು ತಿಳಿಸಿದರು. ನನ್ನ ಜಾಗ್ವರ್ ಮತ್ತು ಸೀತರಾಮ ಕಲ್ಯಾಣವನ್ನು ನೋಡಿರುವುದಾಗಿ ರೇವತಿಯವರೇ ನನಗೆ ಹೇಳಿದರು ಎಂದರು.
ಎರಡು ಮನೆಯಲ್ಲೂ ಖುಷಿಯ ವಾತಾವರಣವಿದೆ. ಸಂಪ್ರದಾಯದ ಪ್ರಕಾರ ಮದುವೆ ಯಾವ ರೀತಿ ನಡೆಯಬೇಕೊ? ಆ ರೀತಿ ನಡೆಯುತ್ತದೆ. ಕೃಷ್ಣಪ್ಪ ಅವರ ಕುಟುಂಬದವರು ಮನೆಗೆ ಬಂದಿದ್ದರು. ಊಟ ಮಾಡಿಕೊಂಡು ಹೋಗಿದ್ದಾರೆ. ಇನ್ನು ಮದುವೆ ದಿನಾಂಕ ಫಿಕ್ಸ್ ಆಗಿಲ್ಲ. ರೇವತಿ ಮತ್ತು ನನ್ನ ಮದುವೆ ಹಿರಿಯರು ನಿಶ್ಚಯ ಮಾಡಿದ್ದಾರೆ. ನಾನು ಈ ಮದುವೆಗೆ ಒಪ್ಪಿಕೊಂಡಿದ್ದು ಕೃಷ್ಣಪ್ಪ ಮತ್ತು ತಂದೆಯಿಂದಾಗಿ, ಅವರು ತುಂಬಾ ಸಂಸ್ಕೃತಿ ಇರುವ ಕುಟುಂಬ ಎಂದು ಪ್ರಶಂಸಿಸಿದರು. (ದಿಗ್ವಿಜಯ ನ್ಯೂಸ್)