ಮಂಡ್ಯಕ್ಕೆ ನಿಖಿಲ್, ಪ್ರತಿಸ್ಪರ್ಧಿಗೆ ಸವಾಲ್

ಚುನಾವಣೆ ಪ್ರಚಾರಕ್ಕೆ ಜೆಡಿಎಸ್ ವಿಧ್ಯುಕ್ತ ಚಾಲನೆ | ಮಾಧ್ಯಮಗಳ ವಿರುದ್ಧ ದಳಪತಿಗಳ ಗುಡುಗು

ಮಂಡ್ಯ: ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಘೂಷಿಸಿದ ಮಾರನೆ ದಿನವೇ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎಂದು ಜೆಡಿಎಸ್ ವರಿಷ್ಠರು ಘೊಷಿಸಿದ್ದು, ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಶದಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ ಅಭ್ಯರ್ಥಿ ಘೊಷಣೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮಿಸುವ ಮೊದಲೇ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು ಅವರು ನಿಖಿಲ್ ಅಭ್ಯರ್ಥಿ ಎಂದು ಘೊಷಿಸಿದರು.

ಸಮಾರಂಭದಲ್ಲಿ ಮಾತನಾಡಿದ ಎಲ್ಲ ನಾಯಕರು, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಾವೇ ಒಪ್ಪಿಸಿ ನಿಖಿಲ್​ರನ್ನು ಅಭ್ಯರ್ಥಿ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವಿರೋಧಕ್ಕೆ ತಿರುಗೇಟು ನೀಡಿದರು.

ದೇವೇಗೌಡ ಮಾತನಾಡಿ, ನಾವು ದೈವದ ಮೇಲೆ ನಂಬಿಕೆ ಉಳ್ಳವರು. ಆ ನಂಬಿಕೆಯಿಂದಲೇ 60 ವರ್ಷ ರಾಜಕಾರಣ ಮಾಡಿದ್ದೇವೆ. ಪ್ರಸ್ತುತ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒತ್ತಡ ಕಾರಣ. ಅನಾರೋಗ್ಯ ಕಾರಣದಿಂದ ನಾನು ಬೇಡ ಎಂದಿದ್ದೆ. ಆದರೂ ಅವರು ಒಪ್ಪದೆ ದೇಶ ಒಡೆಯುವವರನ್ನು ಅಧಿಕಾರದಿಂದ ದೂರವಿಡಬೇಕೆಂದು ಪಟ್ಟು ಹಿಡಿದ ಕಾರಣ ಕುಮಾರಸ್ವಾಮಿಯನ್ನು ಸಿಎಂ ಆಗಲು ಒಪ್ಪಿಸಿದೆ ಎಂದರು. ಹಾಸನದಲ್ಲಿ ಒಬ್ಬ ಮೊಮ್ಮಗನಿಗೆ ಕಣ್ಣೀರಾಕಿದ್ದಾಯ್ತು. ಇವತ್ತು ನಾನು ಕಣ್ಣೀರು ಹಾಕಲ್ಲ. ನನ್ನ ಕಣ್ಣೀರಿನ ಬಗ್ಗೆ ವ್ಯಂಗ್ಯ ಮಾಡಬೇಡಿ. ತಂದೆ ಹಿಂದೆ ನಿಲ್ತೀನಿ ಅಂದವನನ್ನು ರಾಜಕೀಯಕ್ಕೆ ತಂದೆ. ಜಿಲ್ಲೆಯ ಶಾಸಕರು, ಸಚಿವರನ್ನು ಕೇಳಿ ಅಭ್ಯರ್ಥಿ ಮಾಡಿದ್ದೇನೆ ಎಂದು ದೇವೇಗೌಡ ಹೇಳಿದರು.

ಗೌಡರನ್ನು ನಂಬಿದ ಯಾರೂ ಬದುಕಿಲ್ಲ!: ದೇವೇಗೌಡರನ್ನು ನಂಬಿದವರು ಯಾರೂ ಬದುಕಿಲ್ಲ ಎಂದು ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು. ನಂತರ ಗಲಿಬಿಲಿಗೊಂಡ ಅವರು, ದೇವೇಗೌಡರನ್ನು ನಂಬಿದ ಯಾರೂ ಕೆಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ಮಾತನಾಡಿದ ಸಿಎಂ, ಶಿವರಾಮೇಗೌಡ ಬಾಯಿತಪ್ಪಿ ಆಡಿದ ಮಾತನ್ನೇ ಮಾಧ್ಯಮಗಳು ದೊಡ್ಡ ಬ್ರೇಕಿಂಗ್ ಸುದ್ದಿ ಮಾಡುತ್ತವೆ. ಸಣ್ಣ-ಪುಟ್ಟ ತಪ್ಪುಗಳನ್ನೇ ಕಾಯುತ್ತಿರುತ್ತವೆ ಎಂದು ಟೀಕಿಸಿದರು.

ಅಂಬಿ ಅಭಿಮಾನಿಗಳ ವಿರುದ್ಧ ಗರಂ

ಅಂಬರೀಷ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದು ಕೊಂಡು ಹೋಗಲು ಬೇಡವೆಂದವರೆ ಈಗ ಮಂಡ್ಯದ ಋಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೆಸರೇಳದೆ ಸುಮಲತಾ ಅಂಬರೀಷ್ ವಿರುದ್ಧ ಕಿಡಿಕಾರಿದರು. ಅಭಿಮಾನಿಗಳ ಒತ್ತಡಕ್ಕೆ ಮಣಿದು, ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲು ಸೇನಾ ಹೆಲಿಕಾಪ್ಟರ್ ತರಿಸಿದೆ. ಪಾರ್ಥಿವ ಶರೀರದ ಬಳಿ ಕುಳಿತಿದ್ದು ಮುಖ್ಯಮಂತ್ರಿ ಆಗಿ ಅಲ್ಲ, ಅಂಬಿ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ. ನಮ್ಮ ಸ್ನೇಹ ಅರಿಯದ ಅವರ ಅಭಿಮಾನಿಗಳು ಜಾಲತಾಣಗಳಲ್ಲಿ ನಮ್ಮ ಬಗ್ಗೆ ಅವಹೇಳನ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಲಕ್ಷ್ಮೀ ಅಶ್ವಿನ್​ಗೌಡರಿಗೆ ಎಂಎಲ್​ಸಿ ಮಾಡಲು ಕರೆದೆ. ಅವರು ಒಪ್ಪಲಿಲ್ಲ. ಅವರ ಪತಿ ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಕೇಂದ್ರದಲ್ಲಿ ಮತ್ತೆ ಲಕ್ಷ್ಮಿಗೆ ಉದ್ಯೋಗ ಕಲ್ಪಿಸಲು ಮಾತನಾಡಿದ್ದೇನೆ. ಇದನ್ನರಿಯದೆ ಹೆಣ್ಣು ಮಗಳಿಗೆ ಅವಮಾನ ಮಾಡಿರುವುದಾಗಿ ದೊಡ್ಡ ಸುದ್ದಿ ಮಾಡುತ್ತವೆ ಎಂದು ಮಾಧ್ಯಮಗಳ ವಿರುದ್ಧ ಸಿಎಂ ವಾಗ್ದಾಳಿ ಮುಂದುವರಿಸಿದರು.

ಸುಮಲತಾರನ್ನು ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆಯಿತ್ತು. ಅವರು ಒಪ್ಪಲಿಲ್ಲ. ಕುಮಾರಸ್ವಾಮಿ ಎಚ್​ಡಿಕೆ ಬಳಿ ರ್ಚಚಿಸಿ ಟಿಕೆಟ್ ಕೇಳಿದ್ದರೆ ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದರು. ಯಾವ ಕಾರಣವೋ ಗೊತ್ತಿಲ್ಲ, ಅವರು ಸಿಎಂ ಜತೆ ಮಾತನಾಡಲಿಲ್ಲ.

| ಡಿ.ಸಿ.ತಮ್ಮಣ್ಣ ಸಾರಿಗೆ ಸಚಿವ

ಅಂಬರೀಷ್ ಪಾರ್ಥಿವ ಶರೀರ ಮತ್ತು ಅಂತ್ಯಕ್ರಿಯೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳೋದು ತಪ್ಪು. ಇದು ತುಂಬಾ ದುರ್ಬಲ ಮಾತು. ಮೃತದೇಹ ತರೋದು ಬೇಡ ಎಂದವರು ಯಾರೆಂಬುದು ನನಗೆ ಗೊತ್ತಿಲ್ಲ. ಅಂಬಿ ಮೃತಪಟ್ಟ ಕೆಲ ದಿನಗಳ ನಂತರ ತಮ್ಮಣ್ಣ ಕರೆ ಮಾಡಿ ಮಾತನಾಡಿಲ್ಲ.

| ಸುಮಲತಾ ಅಂಬರೀಷ್