ನಿಖಿಲ್ ಗೆಲುವಿಗೆ ನಿಮಿಷಾಂಬದೇವಿಗೆ 101 ಈಡುಗಾಯಿ ಸೇವೆ

ಶ್ರೀರಂಗಪಟ್ಟಣ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲುವಿಗೆ ಹಾರೈಸಿ ಸೋಮವಾರ ಪಟ್ಟಣದ ಗಂಜಾಂನ ನಿಮಿಷಾಂಬ ದೇವಸ್ಥಾನದಲ್ಲಿ 101 ಈಡುಗಾಯಿ ಸೇವೆ ಸಲ್ಲಿಸಲಾಯಿತು.

ಜೆಡಿಎಸ್ ತಾಲೂಕು ಅಧ್ಯಕ್ಷ ಪೈ.ಮುಕುಂದ ನೇತೃತ್ವದಲ್ಲಿ ಕಾರ್ಯಕರ್ತರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಪರ ಘೋಷಣೆ ಕೂಗಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಪೈ.ಮುಕುಂದ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆರೋಗ್ಯ ಚೆನ್ನಾಗಿರುವಂತೆ ಪ್ರಾರ್ಥಿಸಿದ್ದೇವೆ. ನಿಖಿಲ್ ಅವರಿಗೆ ತಂದೆ ಅವರಂತೆಯೇ ಜನಪರ ಕಾಳಜಿ ಇದೆ. ಎಚ್‌ಡಿಕೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಐದಾರು ತಿಂಗಳಿಗೆ ಜಿಲ್ಲೆಯ ಅಭಿವೃದ್ಧಿಗೆ 8.5 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಯಾಗಬೇಕಾದರೆ ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲ್ಲಬೇಕು ಎಂದರು.

ನಂತರ ದೇವಸ್ಥಾನದ ಬಳಿ ವರ್ತಕರಿಗೆ ಕರಪತ್ರ ಹಂಚಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ಮಾಡಲಾಯಿತು. ಜೆಡಿಎಸ್ ಕಾರ್ಯಾಧ್ಯಕ್ಷ ಎನ್.ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ, ನಗರಾಧ್ಯಕ್ಷ ಎಂ.ಸುರೇಶ್, ಪುರಸಭೆ ಸದಸ್ಯ ಎಸ್.ಪ್ರಕಾಶ್, ಪದ್ಮಮ್ಮ, ಸಿದ್ದೇಗೌಡ, ಎಂ.ನಂದೀಶ್, ಗಂಜಾಂ ಶಿವು ಇತರರಿದ್ದರು.