ದತ್ತಾತ್ರೇಯ ಪೀಠದಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಸದ್ದು ಕೇಳಿ ತಬ್ಬಿಬ್ಬಾದ ಸಿಎಂ: ಅನ್ಯತಾ ಭಾವಿಸಬೇಡಿ ಎಂದ ಅರ್ಚಕರು

ಕಲಬುರಗಿ: ಕಾಕತಾಳೀಯ ಅಂದರೆ ಇದೇ ಅಲ್ಲವೇ? ಯಾವ ಪದದ ಕೂಗು ತಮ್ಮ ಕಿವಿಗೆ ಮತ್ತೆ ಬೀಳಬಾರದೆಂದು ಆಶಿಸುತ್ತಿದ್ದ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಮತ್ತೆ ಅದೇ ಪದ ಬಂದು ಕಿವಿಗೆ ರಾಚಿದರೆ ಕಂಗಾಲಾಗುವುದಂತೂ ಸತ್ಯ. ಅಲ್ಲಿ ನಡೆದಿದ್ದು ಅದೇ…

ಮಂಡ್ಯ ಲೋಕಸಭಾ ಚುನಾವಣಾ ಕಾವು ಆರಂಭವಾದ ದಿನದಿಂದ ನಿಖಿಲ್​ ಎಲ್ಲದೀಯಪ್ಪಾ ಎಂಬ ಪದ ಸಾಕಷ್ಟು ಸದ್ದು ಮಾಡುತ್ತಿದೆ. ದೇಶ-ವಿದೇಶಗಳಲ್ಲೂ ಇದರ ಹವಾ ಸೃಷ್ಟಿಯಾಗಿ ಸಾಕಷ್ಟು ಟ್ರೋಲ್​ ಕೂಡ ಆಗಿತ್ತು. ಆದರೆ, ಇದೇ ಪದ ದೇವೇಗೌಡರ ಕುಟುಂಬಕ್ಕೆ ಇರಿಸುಮುರಿಸನ್ನು ಉಂಟುಮಾಡಿತ್ತು.

ಸದ್ಯ ಚುನಾವಣೆ ಮುಗಿದು ಕೊಂಚ ನಿರಾಳರಾಗಿದ್ದ ಸಿಎಂ ಕುಮಾರಸ್ವಾಮಿ ಅವರ ಕಿವಿಗೆ ಮತ್ತೆ ನಿಖಿಲ್​ ಎಲ್ಲಿದ್ದೀಯಪ್ಪಾ ಎಂಬ ಕೂಗು ಕೇಳಿದೆ. ಇಂದು(ಮಂಗಳವಾರ) ಗಾಣಗಾಪುರದ ದತ್ತಾತ್ರೇಯ ಪೀಠಕ್ಕೆ ಸಿಎಂ ಭೇಟಿ ನೀಡಿದ್ದರು. ಪೂಜೆಯ ವೇಳೆ ಅರ್ಚಕರ ಬಾಯಲ್ಲಿ ಬಂದ ನಿಖಿಲ್​ ಎಲ್ಲಿದೀಯಪ್ಪಾ ಎಂಬ ಕೂಗು ಸಿಎಂರನ್ನು ತಬ್ಬಿಬ್ಬಾಗಿಸಿದೆ.

ಕಾಕತಾಳೀಯವೆಂದರೆ ಇಲ್ಲಿ ಅರ್ಚಕರ ಮಗನ ಹೆಸರು ನಿಖಿಲ್​ ಎಂದು. ದೀಪದ ಬತ್ತಿ ಖಾಲಿಯಾಗಿದ್ದ ವೇಳೆ ಅರ್ಚಕ ಸಾಮಾನ್ಯವಾಗಿಯೇ ತಮ್ಮ ಮಗನನ್ನು ನಿಖಿಲ್​​ ಎಲ್ಲಿದ್ದೀಯಪ್ಪಾ… ಎಂದು ಕರೆದಿದ್ದಾರೆ. ಆದರೆ, ಸಿಎಂ ಅಚ್ಚರಿಗೆ ಒಳಗಾಗಿದ್ದನ್ನು ಅರಿತ ಅರ್ಚಕರು ತಕ್ಷಣ ಅನ್ಯತಾ ಭಾವಿಸಬೇಡಿ ಎಂದು ಮನವರಿಕೆ ಮಾಡಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *