ಕೋಮುವಾದಿಗಳಿಂದ ಭಯದ ವಾತಾವರಣ ನಿರ್ಮಾಣ

 

ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಆತಂಕ

ಮೈಸೂರು: ಕೋಮುವಾದಿಗಳಿಂದಾಗಿ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ದೇಶವನ್ನು ಕೋಮುವಾದಿಗಳಿಂದ ದೂರವಿಡಬೇಕಾದ ಅಗತ್ಯವಿದೆ ಎಂದು ಮುಂಡರಗಿಯ ತೋಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೋಂಟಾದರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮೈಸೂರು ವಿವಿ ಕುವೆಂಪು ಕನ್ನಡ ಆಧ್ಯಯನ ಸಂಸ್ಥೆ, ಸಂಶೋಧನಾ ವಿದ್ಯಾರ್ಥಿ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 127ನೇ ಜನ್ಮದಿನಾಚರಣೆ ಮತ್ತು ವರ್ತಮಾನದ ಕನ್ನಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಬುದ್ಧನದು ಅದ್ಬುತವಾದ ಬಹುದೊಡ್ಡ ವ್ಯಕ್ತಿತ್ವ , ಆತ ಸಮುದಾಯಗಳನ್ನು ಹುಡುಕಲಿಲ್ಲ. ಸಮುದಾಯಗಳಿಗೆ ಮನ್ನಣೆಯನ್ನೇ ನೀಡದೆ ಜ್ಞಾನದ ಹರಿವನ್ನು ಹುಡುಕಿಕೊಂಡು ಹೊರಟವರಿಗೆ ಪ್ರಾಮುಖ್ಯತೆ ನೀಡಿದ. ಶ್ರೇಣೀಕೃತ ವ್ಯವಸ್ಥೆಯನ್ನು ಧಿಕ್ಕರಿಸಿದ. 12ನೇ ಶತಮಾನದಲ್ಲಿ ಭಕ್ತಿಭಂಡಾರಿ ಬಸವಣ್ಣ ಪರಿವರ್ತನೆಯಾಗಿದ್ದು ವೈಚಾರಿಕವಾದದಿಂದಲೇ ವಿನಃ ಲಿಂಗದೀಕ್ಷೆಯಿಂದಲ್ಲ ಎಂದರು.

ಆ ವೈಚಾರಿಕವಾದವೇ ಅವರಲ್ಲಿ ಮಾನವೀಯತೆ ಬೆಳೆಸಿದ್ದು, ಆ ಮಾನವೀಯತೆಯನ್ನೆ ಬದುಕಾಗಿಸಿಕೊಂಡು ಬಸವಣ್ಣ ಮತ್ತು ಆ ಕಾಲಘಟ್ಟದ ಶರಣರು ಬದುಕಿದರು ಮತ್ತು ಅದನ್ನೆ ಮನುಕುಲಕ್ಕೆ ಸಾರಿದರು. ಜೀವನದಲ್ಲಿ ಅನುಭಾವದ ಚಿಂತನೆಗಳು ಇರಬೇಕೆ ಹೊರತು ಗುಲಾಮಿತನಕ್ಕೆ ತಳ್ಳುವ ಗ್ರಂಥ ಚಿಂತನೆಯಲ್ಲ. ಇಂತಹ ಚಿಂತನೆಗಳ ಹತ್ತಿರ ಯುವ ಸಮಾಜ ಸುಳಿಯಲೇ ಬಾರದು ಎಂದರು

ದಲಿತರು ಮೀಸಲಾತಿಯ ದಲಿತರಾಗದೇ, ಅಂಬೇಡ್ಕರ್‌ರಂತೆ ಹೋರಾಟದ ಮನುಷ್ಯರಾಗಬೇಕು. ಆತ್ಮ ಜಾಗೃತಿ, ಸಮಾನತೆ, ವೈಚಾರಿಕವಾದದಿಂದ ಸಮಾಜ ಕಟ್ಟಬೇಕು. ಮಾನಸಿಕವಾಗಿ ಮೊದಲು ದೇಶವನ್ನು ಸ್ವಚ್ಛವಾಗಿಸಬೇಕು ಆ ನಂತರ ಭೌತಿಕವಾಗಿ ಸ್ವಚ್ಛಗೊಳಿಸಬೇಕು. ಆತ್ಮಬಲ, ತೋಳ್ಬಲದಿಂದ ಬದುಕುವ ಯುವಜನತೆ ಸೃಷ್ಟಿಯಾಗಬೇಕಿದೆ. ಆದರೆ, ಇಂದು ಪ್ರಜ್ಞಾವಂತರೆ ಮೂಢರಾಗುತ್ತಿರುವುದು ದೇಶದ ದುರಂತ. ಇಂತಹ ಮೌಢ್ಯತೆಯನ್ನು ತೊಡೆದು ಹಾಕಬೇಕಾಗಿದೆ. ಇಂತಹ ವ್ಯವಸ್ಥೆಯ ವಿರುದ್ಧ ಹೋರಾಡಿದ ಬಸವ ಮತ್ತು ಅಂಬೇಡ್ಕರ್ ಮನುಕುಲದ ಕಣ್ಣುಗಳು ಹಾಗೂ ಶ್ರೇಷ್ಠರು ಎಂದು ತಿಳಿಸಿದರು.

ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತನಾಡಿ, ಇತಿಹಾಸದಲ್ಲಿ ಅನೇಕ ಮಹನೀಯರು ಬಂದರು ಅದರಲ್ಲಿ ಕೆಲವರು ಮಾತ್ರ ಪ್ರಾತಃ ಸ್ಮರಣೀಯರಾಗಿ ಉಳಿಯುತ್ತಾರೆ ಮತ್ತು ಅವರ ಆದರ್ಶಗಳು ನಿರಂತರವಾಗಿರುತ್ತವೆ. ಅಂತವರಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಪ್ರಮುಖರು. ಇವರ ಚಿಂತನೆಗಳು ಸಮಾಜಮುಖಿಯಾಗಿವೆ. ಮತ್ತು ರಕ್ತಪಾತ ರಹಿತ ಹೋರಾಟದ ಆದರ್ಶಗಳಾಗಿವೆ ಎಂಬುದು ಸಮಾನ ಮನಸ್ಕರಿಗೆ ಮಾತ್ರ ನಿಲುಕುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಇವರ ವ್ಯಕ್ತಿತ್ವವನ್ನು ಅಧ್ಯಯನ ಮಾಡುವುದು ಅವಶ್ಯಕ ಎಂದರು.
ಮೈಸೂರು ವಿವಿಯ ಸ್ವಚ್ಛತೆಗೆ ಶ್ರಮಿಸಿದ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಮಾತನಾಡಿದರು. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಆಶಯ ನುಡಿಗಳನ್ನಾಡಿದರು. ಸಂಶೋಧಕರ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಮೂರ್ತಿ ಇದ್ದರು.

Leave a Reply

Your email address will not be published. Required fields are marked *