ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಉಂಟಾಗಿರುವ ರಸ್ತೆಗುಂಡಿಗಳ ದುರಸ್ತಿ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಂಗಳವಾರ ರಾತ್ರಿ ನಗರ ಪ್ರದಕ್ಷಿಣೆ ನಡೆಸಿದರು.
ಹೆಬ್ಬಾಳ ಬಳಿಯ ಎಸ್ಟಿಮ್ ಮಾಲ್ನಿಂದ ಪರಿಶೀಲನೆ ಆರಂಭಿಸಿದ ಅವರು ಹೆಬ್ಬಾಳ ಜಂಕ್ಷನ್, ವೀರಣ್ಣನಪಾಳ್ಯ, ನಾಗವಾರ, ಎಚ್‌ಬಿಆರ್ ಲೇಔಟ್, ಹೆಣ್ಣೂರು ಸೇರಿ ಪೂರ್ವ ವಲಯದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ಈ ಎಲ್ಲ ಪ್ರದೇಶಗಳಲ್ಲಿ ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿರುವ ಕಾರಣ ಬಿಎಂಆರ್‌ಸಿಎಲ್‌ನ ಎಂಡಿ ಮಹೇಶ್ವರ ರಾವ್ ಅವರೊಂದಿಗೆ ಕಾಮಗಾರಿಗಳನ್ನು ಪರಿಶೀಲಿಸಿದರು. ಮೆಟ್ರೋ ಕಾಮಗಾರಿಯಿಂದ ನಾಗರಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸುರಕ್ಷತೆ ಜತೆಗೆ ಕೆಲಸ ಮುದಿಗ ಬೆನ್ನಲ್ಲೇ ರಸ್ತೆಗಳಿಗೆ ಡಾಂಬರು ಹಾಕಬೇಕು ಎಂದು ಸೂಚಿಸಲಾಗಿದೆ.
2,000 ರಸ್ತೆಗುಂಡಿ ಬಾಕಿ:
ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್, ನಗರದ ವಿವಿಧೆಡೆ ಕಳೆದ ಏಪ್ರಿಲ್‌ನಿಂದ ಈವರೆಗೆ ಮುಖ್ಯ ರಸ್ತೆಗಳಲ್ಲಿ 4 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ 2 ಸಾವಿರ ಗುಂಡಿ ಮುಚ್ಚಬೇಕಿದ್ದು, ಅವುಗಳನ್ನು ವಾರದೊಳಗೆ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ವಾಡ್‌ಗಳಲ್ಲೂ 1,600 ಗುಂಡಿಗಳನ್ನು ಗುರುತಿಸಲಾಗಿದೆ. ಇದರ ಹೊರತಾಗಿಯೂ ಸಣ್ಣ ಗುಂಡಿಗಳು 2-3 ಜಾಸ್ತಿ ಇರಬಹುದು. ಅವುಗಳನ್ನು ಕಾಲಮಿತಿಯೊಳಗೆ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
660 ಕೋಟಿ ರೂ. ಟೆಂಡರ್ ಶೀಘ್ರ:
ನಗರದ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಆಯ್ದ ಪ್ರಮುಖ ರಸ್ತೆಗಳಲ್ಲಿ 660 ಕೋಟಿ ರೂ. ವೆಚ್ಚದ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆದಿದೆ. ಇದರಿಂದ ಇಂತಹ 459 ಕಿ.ಮೀ. ರಸ್ತೆ ಸುಧಾರಣೆಗೊಂಡಲ್ಲಿ ರಸ್ತೆಗುಂಡಿ ಸಮಸ್ಯೆಗೆ ಹೆಚ್ಚಿನ ಪರಿಹಾರ ಸಿಗಲಿದೆ. ಬೇಗನೆ ಟೆಂಡರ್ ಕರೆದು ಮುಂದಿನ ಜನವರಿ ತಿಂಗಳಾಂತ್ಯಕ್ಕೆ ಉತ್ತಮ ರಸ್ತೆಗಳನ್ನಾಗಿಸುವ ಕಾರ್ಯ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಪರಿಶೀಲನೆಯ ವೇಳೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ರಾವ್, ಪಾಲಿಕೆಯ ವಲಯ ಆಯುಕ್ತರಾದ ಕರೀಗೌಡ, ಸ್ನೇಹಲ್, ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಪ್ರಧಾನ ಅಭಿಯಂತರ ಪ್ರಹ್ಲಾದ್ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.