ಭಕ್ತರಿಗೆ ಸಂತಸ ತಂದ ಗೌಡಾ ಪ್ರಶಸ್ತಿ

ಕಲಬುರಗಿ:  ಪ್ರಶಸ್ತಿ, ಪುರಸ್ಕಾರಗಳು ಮೊದಲಿನಂತೆ ಘನತೆ ಗೌರವ ಉಳಿಯದ ಈ ದಿನಗಳಲ್ಲಿ ನನಗೆ ಕೊಡಮಾಡಿದ ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನನ್ನ ಭಕ್ತರಿಗೆ ಸಂತಸ ಉಂಟು ಮಾಡಿದೆ. 15-20 ವರ್ಷ ಮೊದಲೇ ಈ ಪ್ರಶಸ್ತಿ ಬಂದಿದ್ದರೆ ನನಗೂ ಸಂತೋಷ ಉಂಟಾಗುತ್ತಿತ್ತು ಎಂದು ಬಾಗೇಪಲ್ಲಿಯ ಶ್ರೀ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ನಿಡಮಾಮಿಡಿ ಶ್ರೀಗಳಿಗೆ ಸುಲಫಲ ಮಠದಲ್ಲಿ ಶಹಬಜಾರ ಭಕ್ತ ಸಮೂಹ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುಜನರ, ಬಹುದಿನಗಳ ಹಾರೈಕೆ ಇತ್ತೇನೋ ಲಭಿಸಿದೆ. ಪ್ರಬುದ್ಧ ನೆಲೆಯಲ್ಲಿ ಗುರುತಿಸಿ ಗೌರವಿಸಿದ್ದಕ್ಕೆ ವಿವಿಗೆ ಕೃತಜ್ಞತೆ ಸಲ್ಲಿಸುವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮಷ್ಟಕ್ಕೆ ನಾವು ಕರ್ತವ್ಯದಲ್ಲಿ ತೊಡಗಿದರೆ ತಾನಾಗಿಯೇ ಪ್ರಶಸ್ತಿಗಳು ಹುಡುಕಿಕೊಂಡು ಬಂದರೆ ಸ್ವೀಕರಿಸುವ ಮೂಲಕ ಅದಕ್ಕೆ ಗೌರವ ನೀಡಬೇಕಾದುದು ನಮ್ಮ ಕರ್ತವ್ಯ ಎಂದರು.
ಶ್ರೀಶೈಲ ಸಾರಂಗಧರ ಸಂಸ್ಥಾನದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜ ಸೇವೆಯಲ್ಲಿದ್ದು, ಸಹೃದಯತೆಯ ಮೇರು ಪರ್ವತ ಆಗಿರುವ ನಿಡುಮಾಮಿಡಿ ಶ್ರೀಗಳಿಗೆ ಗುವಿವಿ ಗೌರವ ಡಾಕ್ಟರೇಟ್ ನೀಡುವ ಮೂಲಕ ತನ್ನನ್ನು ತಾನೇ ಗೌರವಿಸಿಕೊಂಡಿದೆ ಎಂದರು.
ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಚವದಾಪುರಿ ಶ್ರೀ ರಾಜಶೇಖರ ಶಿವಾಚಾರ್ಯ, ಶ್ರೀ ಗುರುಬಸವ ಶಿವಾಚಾರ್ಯ ಅತನೂರ, ಹಾಗರಗುಂಡಗಿಯ ಶ್ರೀ ಶಿವಾನಂದ ಸ್ವಾಮೀಜಿ, ಯುವ ಉದ್ಯಮಿ ಚಂದು ಪಾಟೀಲ್, ಮಲ್ಲಿಕಾಜರ್ುನ ಖೇಗಜಿ, ದೇವೇಂದ್ರ ಹೆಗ್ಗಡೆ, ಸಾಹೇಬಗೌಡ ಬಿರಾದಾರ, ರಾಜು ಲೇಂಗಟಿ, ಅರ್ಜುನ ಭದ್ರೆ, ಬಸಣ್ಣ ಸಿಂಘೆ, ವಿಜಯಕುಮಾರ ತೇಗಲತಿಪ್ಪಿ, ಈರಣ್ಣ ಗೊಳೇದ ಇತರರಿದ್ದರು.

ಸಾಮಾಜಿಕ ಹೋರಾಟಗಾರರು ಪ್ರಶಸ್ತಿ ಪುರಸ್ಕಾರ ಬಯಸಲ್ಲ. ತಾನಾಗಿಯೇ ಬಂದರೆ ಸ್ವೀಕರಿಸುತ್ತಾರೆ. ವಯೋಧರ್ಮಕ್ಕೆ ಅನುಗುಣ ಅಭಿರುಚಿ ಬದಲಾಗುತ್ತದೆ. ಸಮಾಜದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿರುವ ಅನೇಕ ಮಹನೀಯರಿದ್ದಾರೆ. ಅನೇಕ ಕಾರಣಕ್ಕೆ ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. ಅಂತಹವರು ಇರುವಾಗ ತೃಣದಷ್ಟು ಸೇವೆ ಸಲ್ಲಿಸಿದ ನನಗೆ ಬೆಟ್ಟದಷ್ಟು ಪ್ರಶಸ್ತಿ ನೀಡಲಾಗಿದೆ. ಈ ಹಂತದಲ್ಲಿ ನನಗೆ ಸಂಭ್ರಮದ ಆಸ್ಥೆ ಉಳಿದಿಲ್ಲ. ನಿಮಗೆ ಖುಷಿಯಾದರೆ ನನಗೂ ಖುಷಿ.
|ಶ್ರೀ ಡಾ.ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ