ನಿಡಸೋಸಿ ಮಠದ ಹುಗ್ಗಿ ಜಾತ್ರೆ

| ಪ್ರಶಾಂತ ರಿಪ್ಪನ್​ಪೇಟೆ

ಗ್ರಾಮೀಣ ಪ್ರದೇಶದಲ್ಲಿರುವ ಮಠ-ಮಂದಿರಗಳಲ್ಲಿ ವಾರ್ಷಿಕವಾಗಿ ನಡೆಯುವ ಹಬ್ಬ, ಜಾತ್ರೆ, ಉತ್ಸವಗಳು ಕೇವಲ ಧಾರ್ವಿುಕ ಪರಂಪರೆಯ ಪ್ರತೀಕವಾಗದೆ ಪ್ರದೇಶವಾರು ಸಂಸ್ಕೃತಿಯ ಪ್ರತಿಬಿಂಬವಾಗಿರುತ್ತವೆ. ಇದೇ ಮಾದರಿಯಲ್ಲಿ ನಿಡಸೋಸಿ ಸಿದ್ಧಸಂಸ್ಥಾನ ಮಠದಲ್ಲಿ ನಡೆಯುವ ಜಾತ್ರೆಯು ಹುಗ್ಗಿ ಜಾತ್ರೆ ಎಂದೇ ಪ್ರಸಿದ್ಧವಾಗಿದೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನಲ್ಲಿರುವ ನಿಡಸೋಸಿ ಸಿದ್ಧಸಂಸ್ಥಾನ ಮಠವು ಗಡಿಭಾಗ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದಲ್ಲಿಯೂ ಭಕ್ತರನ್ನು ಹೊಂದಿದೆ. ಈ ಮಠದಲ್ಲಿ ವರ್ಷಕ್ಕೆ ಎರಡು ಬಾರಿ ಶಿವರಾತ್ರಿಯಲ್ಲಿ ಬೆಳ್ಳಿ ರಥೋತ್ಸವ ಹಾಗೂ ಭಾದ್ರಪದ ಮಾಸದಲ್ಲಿ ಕರ್ತೃ ಶ್ರೀ ದುರದುಂಡೀಶ್ವರ ಸ್ವಾಮಿಗಳ ಪಲ್ಲಕ್ಕಿ ಮಹೋತ್ಸವ ನಡೆಯುತ್ತದೆ. ಈ ಎರಡೂ ಜಾತ್ರೆಗಳಲ್ಲೂ ಹುಗ್ಗಿಯೇ ಪ್ರಧಾನ. ಆದ್ದರಿಂದ ಇದು ಹುಗ್ಗಿ ಜಾತ್ರೆ ಎಂದು ಜನಪ್ರಿಯವಾಗಿದೆ.

ಒಂದು ಕಾಲಕ್ಕೆ ದುರ್ಬಲ ಆರ್ಥಿಕತೆಯ ಜನಸಮುದಾಯವಿದ್ದ ಪ್ರದೇಶ ಇದಾಗಿತ್ತು. ಎರಡು ಹೊತ್ತಿನ ಸಾಮಾನ್ಯ ಊಟಕ್ಕೂ ತೊಂದರೆಯಲ್ಲಿದ್ದ ಜನಸಮುದಾಯವನ್ನು ದಾಸೋಹದ ಮೂಲಕ ಸದೃಢಗೊಳಿಸುವ ಕೆಲಸ ಮಠದಿಂದ ನಡೆಯುತ್ತಿತ್ತು. ಆ ಕಾಲದಲ್ಲಿ ಹುಗ್ಗಿ ಪ್ರಸಾದವೆಂದರೆ ಅತ್ಯಂತ ಹಿರಿದಾದ ಸಿಹಿಪದಾರ್ಥ. ಮಠದ ಜಾತ್ರೆಯ ನೆಪದಲ್ಲಿ ವರ್ಷಕ್ಕೆ ಎರಡು ಬಾರಿ ಈ ಭಾಗದ ಭಕ್ತರಿಗೆ ಹುಗ್ಗಿ ಪ್ರಸಾದವನ್ನು ದಾಸೋಹ ಮಾಡುತ್ತಿದ್ದರಿಂದ ಹುಗ್ಗಿ ಮಠ – ಹುಗ್ಗಿ ಜಾತ್ರೆ ಎಂಬ ಹೆಸರು ಬಂದಿದೆ. ಇಂದು ಎಷ್ಟೇ ಶ್ರೀಮಂತಿಕೆ ಬಂದಿದ್ದರೂ ಮಠದ ಹುಗ್ಗಿ ಪ್ರಸಾದವನ್ನು ಸ್ವೀಕಾರ ಮಾಡಲು ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಶ್ರಾವಣಮಾಸದ ಒಂದು ತಿಂಗಳ ಪರ್ಯಂತ ನಡೆಯುವ ಪುರಾಣದ ಮಂಗಲೋತ್ಸವ ಹಾಗೂ ದುರದುಂಡೀಶ್ವರರ ಪಲ್ಲಕ್ಕಿ ಮಹೋತ್ಸವವು ಪ್ರತಿವರ್ಷ ಭಾದ್ರಪದ ಮಾಸದ ಅಷ್ಟಮಿಯಂದು ನಡೆಯಲಿದೆ. ಅದರಂತೆ ಇದೇ

ಸೆ. 16 ಮತ್ತು 17ರಂದು ಪುರಾಣ ಮಂಗಲೋತ್ಸವ, ಪಲ್ಲಕ್ಕಿ ಮಹೋತ್ಸವ ಮತ್ತು

ಮಹಾದಾಸೋಹವನ್ನು ಹಮ್ಮಿಕೊಳ್ಳಲಾಗಿದೆ.

ಮಠದ ಪರಂಪರೆ: ನಿಡಸೋಸಿ ಶ್ರೀ ಸಿದ್ಧಸಂಸ್ಥಾನಮಠವು ಮೂರು ಶತಮಾನಗಳ ಇತಿಹಾಸವನ್ನು ಹೊಂದಿದೆ. ಈ ಮಠದ ಮೂಲಪುರುಷ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳು. ಇದೇ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಿಜಲಿಂಗಪ್ಪ ಬಾಲ್ಯದಿಂದಲೂ ಅಧ್ಯಾತ್ಮದತ್ತ ಒಲವು ಹೊಂದಿದ್ದರು. ಹಿರಿಯರ ಒತ್ತಾಯಕ್ಕೆ ವಿವಾಹವಾದರೂ ಧಾರ್ವಿುಕ ಆಸಕ್ತಿಯನ್ನು ಕಳೆದುಕೊಳ್ಳಲಿಲ್ಲ.

ಹೀಗಿರುವಾಗ ಸಮೀಪದ ಕಮತೂರು ಕರ್ಪರಹಳ್ಳದ ಬಿಲ್ವಾಶ್ರಮಕ್ಕೆ ಆಗಮಿಸಿದ ಶ್ರೀ ದುರದುಂಡೀಶ್ವರ ಮಹಾಸ್ವಾಮಿಗಳ ಶಕ್ತಿಗೆ ಮಾರುಹೋಗಿ ಅವರ ಸೇವೆ ಮಾಡಿಕೊಂಡಿದ್ದರು. ಕೆಲವು ವರ್ಷಗಳ ನಂತರ ಸ್ವಾಮಿಗಳು ನಿಜಲಿಂಗಪ್ಪನವರಿಗೆ ಒಂದು ರುದ್ರಾಕ್ಷಿ ಮತ್ತು ಲಿಂಗವನ್ನು ಅನುಗ್ರಹಿಸಿದರು. ನಂತರ ನಿಜಲಿಂಗಪ್ಪ ಅದೇ ಜಾಗದಲ್ಲಿ ಅನುಷ್ಠಾನ ಮುಂದುವರಿಸಿದರು. ಅವರ ತಪಸ್ಸನ್ನು ಭಂಗಪಡಿಸಲು ಕೆಲವು ಕಿಡಿಗೇಡಿಗಳು ದೇವದಾಸಿಯಾಗಿದ್ದ ಕಲಾವತಿ ಎಂಬ ಮಹಿಳೆಯನ್ನು ಕಳುಹಿಸಿದರು. ಅವಳು ಹಾಡು ಹೇಳುತ್ತ ಆಶ್ರಮದ ಹೊರಗೆ ನಿಂತಿದ್ದಾಗ ಸರ್ಪವೊಂದು ಬಂದು ಭಯಭೀತಳಾಗಿ ಚೀರಿದಳು. ಆಗ ಅವಳಿಗೆ ಧೈರ್ಯ ಹೇಳಿದ ಸ್ವಾಮಿಗಳು, ವಿಷಯ ತಿಳಿದು, ‘ನೀನು ಮಾಡುತ್ತಿರುವುದು ತಪ್ಪೆಂದು’ ಬುದ್ಧಿಮಾತು ಹೇಳಿದರು.

ಕೆಲವು ವರ್ಷದ ನಂತರ ಗ್ರಾಮಕ್ಕೆ ಆಗಮಿಸಿದ ನಿಜಲಿಂಗಪ್ಪನವರು ಗ್ರಾಮದ ಹಿರಿಯರ ಬಳಿ ಮಾತನಾಡಿ ದುರದುಂಡೀಶ್ವರರು ನೀಡಿದ್ದ ರುದ್ರಾಕ್ಷಿ, ಲಿಂಗವನ್ನು ಇಟ್ಟು ತೋರು ಗದ್ದುಗೆಯನ್ನು ಸ್ಥಾಪಿಸಿದರು. ಈ ಹಿಂದೆ ಗುರುಗಳಿಂದ ಬುದ್ಧಿ್ದ ಹೇಳಿಸಿಕೊಂಡಿದ್ದ ಕಲಾವತಿಗೆ ತನ್ನ ತಪ್ಪಿನ ಅರಿವಾಗಿ ಗುರುಗಳಿಗೆ ಶರಣಾದಳು. ಮಠದ ಗದ್ದುಗೆಯ ಮುಂದಿನ ಮೆಟ್ಟಿಲಿನ ಮೇಲೆ ತನ್ನ ಮೂರ್ತಿಯನ್ನು ಕೆತ್ತಿಸಿ, ಬರುವ ಭಕ್ತರು ಆ ಮೂರ್ತಿಯನ್ನು ತುಳಿದು ಒಳಕ್ಕೆ ಹೋದರೆ ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಎಂದು ಬೇಡಿಕೊಂಡಳು. ಅರಭಾವಿಯಲ್ಲಿರುವ ದುರದುಂಡೀಶ್ವರರ ಮೂಲ ಗದ್ದುಗೆಯೂ ಸೇರಿದಂತೆ ಈ ಪ್ರಾಂತದಲ್ಲಿರುವ ದುರದುಂಡೀಶ್ವರರ ಎಲ್ಲ ದೇವಾಲಯಗಳ ಮೆಟ್ಟಿಲಿನ ಮೇಲೆ ಕಲಾವತಿಯ ಮೂರ್ತಿಯನ್ನು ಕಾಣಬಹುದು. ಹೀಗೆ ಆರಂಭವಾದ ದುರದುಂಡೀಶ್ವರ ಮಠದ ಪರಂಪರೆಯಲ್ಲಿ ಇಲ್ಲಿಯವರೆಗೆ ಒಂಬತ್ತು ಜನ ಪೀಠಾಧಿಪತಿಗಳು ಆಗಿಹೋಗಿದ್ದಾರೆ. ಸದ್ಯ ಇರುವ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಠದ ಪರಂಪರೆಯ ಜೊತೆಗೆ ಸಮಾಜವನ್ನು ಮುನ್ನಡೆಸುತ್ತಿದ್ದಾರೆ.

ಮಠದ ಸಾಮಾಜಿಕ ಕ್ರಾಂತಿ: ಶ್ರೀಮಠವು ಧಾರ್ವಿುಕ ಚಟುವಟಿಕೆಗಳ ಜತೆಗೆ ಸಾಮಾಜಿಕವಾಗಿ ಹಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಮಠದ ಅಧೀನದಲ್ಲಿರುವ ನೂರಾರು ಎಕರೆ ಕೃಷಿಭೂಮಿಯಲ್ಲಿ ಮಿಶ್ರ ಬೆಳೆ ಸೇರಿದಂತೆ ಜೈವಿಕ ಮತ್ತು ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ಈ ಭಾಗದ ರೈತರಿಗೆ ಹೊಸ ಹುರುಪನ್ನು ನೀಡಿದೆ. ಏತ ನೀರಾವರಿಯ ಮೂಲಕ ಸಾಕಷ್ಟು ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈಗಿನ ಸ್ವಾಮಿಗಳು ಇಲ್ಲಿ ವಯಸ್ಸಾದ, ಯಾರಿಗೂ ಬೇಡವಾದ ಗೋವುಗಳಿಗಾಗಿ ಗೋಶಾಲೆ ತೆರೆದಿದ್ದಾರೆ. ಗಡಿಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವ ಮಠವು; ಹತ್ತಾರು ಶಿಕ್ಷಣಸಂಸ್ಥೆಗಳ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುತ್ತಿದೆ.

ಹೀಗೆ ನಿಡಸೋಸಿ ಮಠವು ಕೃಷಿ, ಶಿಕ್ಷಣ, ಸಂಸ್ಕೃತಿ, ಪರಂಪರೆಯ ಜೊತೆಗೆ ಮೂಢನಂಬಿಕೆ ನಿವಾರಣೆಯಂತಹ ವಿಚಾರಗಳಲ್ಲಿ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿದೆ.