ಈಜಲು ಹೋದ ಯುವಕ ಸಾವು

ನಿಡಗುಂದಿ: ಸ್ಥಳೀಯ ಪಟ್ಟಣ ಪಂಚಾಯಿತಿ ಸಮೀಪದ ಸವಳುಬಾವಿಗೆ ಈಜಲು ತೆರಳಿದ್ದ ಯುವಕ ಭಾನುವಾರ ಸಾವಿಗೀಡಾಗಿದ್ದಾನೆ.

ಪಟ್ಟಣದ ಮಹ್ಮದ್ ಅಸ್ಲಂ ಕುತ್ಬುದ್ದೀನ್ ಮುದ್ದೇಬಿಹಾಳ (20) ಮೃತ ದುರ್ದೈವಿ. ಮಧ್ಯಾಹ್ನ 2 ಗಂಟೆ ವೇಳೆಗೆ ಈಜಲು ಬಾವಿಗೆ ಜಿಗಿದ ಯುವಕನ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮೇಲಕ್ಕೆ ಏಳಲಾಗದೆ ಮುಳುಗಿದ್ದಾನೆ ಎನ್ನಲಾಗಿದೆ.

ಬಸವನಬಾಗೇವಾಡಿ ಅಗ್ನಿಶಾಮಕ ದಳ ಹಾಗೂ ಆಲಮಟ್ಟಿ ಮೀನುಗಾರರು ಎರಡು ಗಂಟೆ ತೀವ್ರ ಹುಡುಕಾಟ ನಡೆಸಿ ಶವ ಪತ್ತೆ ಮಾಡಿದ್ದಾರೆ. ಮೀನುಗಾರರಾದ ಆನಂದ ಕಟ್ಟಿಮನಿ, ರಾಹುಲ ಸಾಳೆ, ದುರ್ಗಪ್ಪ ಭೋವಿ, ಅಗ್ನಿಶಾಮಕ ದಳದ ಬಬ್ರುವಾಹನ ಜಮಾದಾರ, ಸಿದ್ದಣ್ಣ ಪೊಲೇಶಿ, ಶ್ರೀಶೈಲ ಬಿರಾದಾರ, ನಾರಾಯಣ ರಾಠೋಡ ಇತರರು ಶವಪತ್ತೆ ಕಾರ್ಯಾಚರಣೆಯಲಿದ್ದರು. ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.