ಭಾರತ ವಿಕ್ರಮ, ಫೈನಲ್ ಹಾದಿ ಸುಗಮ

ಕೊಲಂಬೊ: ಕನ್ನಡಿಗ ಮನೀಷ್ ಪಾಂಡೆ (42*ರನ್, 31 ಎಸೆತ, 3 ಬೌಂಡರಿ, 1 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಹಾಗೂ ವೇಗಿ ಶಾರ್ದೂಲ್ ಠಾಕೂರ್ (27ಕ್ಕೆ 4) ಬಿಗಿ ಬೌಲಿಂಗ್ ನೆರವಿನಿಂದ ಭಾರತ ತಂಡ ನಿದಹಾಸ್ ಟ್ರೋಫಿ ಟಿ20 ತ್ರಿಕೋನ ಸರಣಿಯ ತನ್ನ 3ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದೆ. ಇದರೊಂದಿಗೆ ಭಾರತ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಲಂಕಾ ವಿರುದ್ಧ ಕಂಡಿದ್ದ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿತಲ್ಲದೆ, ಫೈನಲ್ ಹಾದಿಯನ್ನು ಸುಗಮವಾಗಿಸಿಕೊಂಡಿತು. ಸೋಮವಾರ ನಡೆದ ಮಳೆ ಬಾಧಿತ ಪಂದ್ಯದ ಆರಂಭ ತಡವಾಗಿದ್ದರಿಂದ ಒಂದು ಓವರ್​ಗೆ ಕಡಿತಗೊಳಿಸಿ ತಲಾ 19 ಓವರ್​ಗೆ ನಿಗದಿಪಡಿಸಲಾಯಿತು. ಕಳೆದ ಪಂದ್ಯದಲ್ಲಿ ಒಟ್ಟು 429 ರನ್ ದಾಖಲಾಗಿದ್ದ ಆರ್. ಪ್ರೇಮದಾಸ ಕ್ರೀಡಾಂಗಣದ ಪಿಚ್​ನಲ್ಲಿ ಈ ಬಾರಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಲಂಕಾ ತಂಡ, ವೇಗಿ ಶಾರ್ದೂಲ್ ಹಾಗೂ ಸ್ಪಿನ್ನರ್ ವಾಷಿಂಗ್ಟನ್ ಸುಂದರ್(21ಕ್ಕೆ 2) ಸಂಘಟಿತ ದಾಳಿಗೆ 9 ವಿಕೆಟ್​ಗೆ 152 ರನ್ ದಾಖಲಿಸಿತು. ಸ್ಪರ್ಧಾತ್ಮಕ ಸವಾಲು ಬೆನ್ನಟ್ಟಿದ ಭಾರತ ತಂಡ, ಅಗ್ರ ಬ್ಯಾಟ್ಸ್​ಮನ್​ಗಳನ್ನು ಬೇಗನೆ ಕಳೆದುಕೊಂಡರೂ ನಂತರ ಮನೀಷ್ ಪಾಂಡೆ-ದಿನೇಶ್ ಕಾರ್ತಿಕ್(39*ರನ್, 25 ಎಸೆತ, 5 ಬೌಂಡರಿ) ಮುರಿಯದ 5ನೇ ವಿಕೆಟ್​ಗೆ ಸೇರಿಸಿದ 68ರನ್ ನೆರವಿನೊಂದಿಗೆ 17.3 ಓವರ್​ಗಳಲ್ಲಿ 4 ವಿಕೆಟ್​ಗೆ 153 ರನ್ ಪೇರಿಸಿ ಜಯಿಸಿತು. ಇನ್ನು ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾವನ್ನೂ ಮಣಿಸುವ ಮೂಲಕ ಭಾರತ ಸುಲಭವಾಗಿ ಫೈನಲ್​ಗೇರಬಹುದಾಗಿದೆ.

ಲಂಕಾ ಮೇಲೆ ನಿಯಂತ್ರಣ

ಭಾರತದ ವಿರುದ್ಧ ಕಳೆದ ಪಂದ್ಯದಲ್ಲೂ ಉತ್ತಮ ಆರಂಭ ನೀಡುವಲ್ಲಿ ವಿಫಲಗೊಂಡಿದ್ದ ಆರಂಭಿಕ ಬ್ಯಾಟ್ಸ್​ಮನ್ ಧನುಷ್ಕಾ ಗುಣತಿಲಕ(17) ಇಲ್ಲೂ ಲಯಕ್ಕೆ ಮರಳಲಿಲ್ಲ. ಉನಾದ್ಕತ್ ಎಸೆದ ಮೊದಲ ಎಸೆತದಲ್ಲೇ ಗುಣತಿಲಕ ಸಿಂಗಲ್ ರನ್ ಕಸಿಯುವ ವೇಳೆ ಕೆಎಲ್ ರಾಹುಲ್ ಅನಗತ್ಯ ಥ್ರೋ ಮಾಡಿ 5 ರನ್ ಸಿಕ್ಕಿತು. 2ನೇ ಎಸೆತವನ್ನು ಕುಸಲ್ ಮೆಂಡಿಸ್ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಸಿಕ್ಸರ್ ಸಿಡಿಸಿ ಉಪಯುಕ್ತ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಬಳಿಕ 2ನೇ ಓವರ್​ನ 2 ಎಸೆತದಲ್ಲಿ ಸಿಕ್ಸರ್ ಬಾರಿಸಿದ ಗುಣತಿಲಕ, ಶಾರ್ದೂಲ್​ರ 3ನೇ ಓವರ್​ನಲ್ಲಿ ರೈನಾ ಹಿಡಿದ ಅದ್ಭುತ ಡೈವ್ ಕ್ಯಾಚ್​ಗೆ ಔಟಾದರು. ಮೊದಲೆರಡು ಪಂದ್ಯಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿ ಎದುರಾಳಿ ಪಾಲಿಗೆ ಸವಾಲಾಗಿದ್ದ ಕುಸಲ್ ಪೆರೇರಾ(3) ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಓವರ್​ನಲ್ಲಿ ರಿವರ್ಸ್ ಸ್ವೀಪ್ ಮಾಡಲು ಹೋಗಿ ಬೌಲ್ಡಾದರು. ಇದು ಲಂಕಾ ರನ್​ರೇಟ್ ವೇಗಕ್ಕೆ ಅಲ್ಪ ಹಿನ್ನಡೆಯಾಯಿತು.

ಮನೀಷ್ ಗೆಲುವಿನ ಇನಿಂಗ್ಸ್

ಟಿ20 ತಂಡದ ಮಧ್ಯಮ ಕ್ರಮಾಂಕದ ವಿಭಾಗಕ್ಕೆ ಬಲ ತುಂಬುವ ಪ್ರಯತ್ನ ಮಾಡುತ್ತಿರುವ ಮನೀಷ್ ಪಾಂಡೆ ಆಕರ್ಷಕ ಬ್ಯಾಟಿಂಗ್ ಮೂಲಕ ಗೆಲುವಿನ ಇನಿಂಗ್ಸ್ ಆಡಿದರು. 22 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ಸುರೇಶ್ ರೈನಾ(27ರನ್, 15 ಎಸೆತ, 2 ಬೌಂಡರಿ, 2 ಸಿಕ್ಸರ್) ಬಿರುಸಿನ ಇನಿಂಗ್ಸ್ ಆಡುವ ಮೂಲಕ ಲಯಕ್ಕೆ ತಂದರು. ರಾಹುಲ್ ಜತೆ 7ನೇ ಓವರ್​ನಲ್ಲಿ ತಂಡದ ಮೊತ್ತವನ್ನು 62ಕ್ಕೇರಿಸಿದ ರೈನಾ ವೇಗಿ ನುವಾನ್ ಫೆರ್ನಾಂಡೊ ಓವರ್​ನಲ್ಲಿ ಔಟಾದರು. ಬಳಿಕ ನಿಧಾನಗತಿಯ ಆಟವಾಡಿದ ಕೆಎಲ್ ರಾಹುಲ್(18) ದುರಾದೃಷ್ಟಕರವಾಗಿ ಹಿಟ್ ವಿಕೆಟ್ ಔಟಾದರು. ಈ ವೇಳೆ ಭಾರತಕ್ಕೆ 55 ಎಸೆತಗಳಲ್ಲಿ ಗೆಲುವಿಗೆ 68 ರನ್ ಅಗತ್ಯವಿತ್ತು. ಆದರೆ ಸಮಯೋಚಿತ ಆಟವಾಡಿದ ಮನೀಷ್ ಪಾಂಡೆ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ನೀಡಿದ ಸಾಥ್​ನಿಂದ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದರು. ಎಸೆತಕ್ಕೊಂದಂತೆ ರನ್ ಬಾರಿಸಿದ ದಿನೇಶ್ ಕಾರ್ತಿಕ್, ಮನೀಷ್ ಒತ್ತಡವನ್ನು ಕಡಿಮೆಗೊಳಿಸಿ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ರೋಹಿತ್, ಧವನ್ ಪೇಲ್

ಭಾರತ ತಂಡದ ಆರಂಭಿಕರಾದ ರೋಹಿತ್ ಶರ್ಮ(11) ಈ ಪಂದ್ಯದಲ್ಲೂ ಕಳಪೆ ಆಟ ಮುಂದುವರಿಸಿದರು. ಸ್ಪಿನ್ನರ್ ಅಕಿಲ ಧನಂಜಯ ಆರಂಭಿಕ ಆಘಾತ ನೀಡಿದರು. ತಲಾ 1 ಬೌಂಡರಿ, ಸಿಕ್ಸರ್ ಬಾರಿಸಿ ಸತತ ವೈಫಲ್ಯದ ಬಳಿಕ ಲಯಕ್ಕೆ ಮರಳುವ ಹಾದಿಯಲ್ಲಿದ್ದ ರೋಹಿತ್ ಮಿಡ್​ವಿಕೆಟ್​ನಲ್ಲಿ ಕುಸಲ್​ಗೆ ಕ್ಯಾಚ್ ನೀಡಿದರು. ಬಳಿಕ ಶಿಖರ್ ಧವನ್(8) ಅನಗತ್ಯ ಹೊಡೆತಕ್ಕೆ ಪ್ರಯತ್ನಿಸಿ ಧನಂಜಯ ಓವರ್​ನಲ್ಲೆ ಮಿಡ್​ಆನ್​ನಲ್ಲಿ ಪೆರೇರಾಗೆ ಕ್ಯಾಚ್ ನೀಡಿದರು.

ರಾಹುಲ್​ಗೆ ಚಾನ್ಸ್

ಕನ್ನಡಿಗ ಕೆಎಲ್ ರಾಹುಲ್ ಕೊನೆಗೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಮೊದಲೆರಡು ಪಂದ್ಯಗಳಲ್ಲಿ ಅಮೂಲ್ಯ ಅವಕಾಶ ಪಡೆದರೂ ವೈಫಲ್ಯ ಕಂಡಿದ್ದ ರಿಷಭ್ ಪಂತ್ ಬದಲು ರಾಹುಲ್ ಕಣಕ್ಕಿಳಿದರು. ದಕ್ಷಿಣ ಆಫ್ರಿಕಾ ಪ್ರವಾಸದ 3ನೇ ಟೆಸ್ಟ್​ನಲ್ಲಿ ರಾಹುಲ್ ಕೊನೇ ಬಾರಿ ಭಾರತ ಪರ ಆಡಿದ್ದರು.

ಕುಸಲ್ ಬಿರುಸಿನ ಆಟ

31 ರನ್​ಗೆ ಮೊದಲೆರಡು ವಿಕೆಟ್ ಕಳೆದುಕೊಂಡರೂ ಲಂಕಾ ತಂಡದ ರನ್​ರೇಟ್ ಕುಸಿಯದಂತೆ ಕುಸಲ್ ಮೆಂಡಿಸ್ ನೋಡಿಕೊಂಡರು. ಬಾಂಗ್ಲಾ ವಿರುದ್ಧವೂ ಅರ್ಧಶತಕ ಬಾರಿಸಿದ್ದ ಕುಸಲ್ ಮೆಂಡಿಸ್ ಮಧ್ಯಮ ಕ್ರಮಾಂಕದಲ್ಲಿ ಉಪುಲ್ ತರಂಗ(22) ನೀಡಿದ ಉಪಯುಕ್ತ ಕಾಣಿಕೆಯ ನೆರವನಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ತರಂಗ 3ನೇ ವಿಕೆಟ್​ಗೆ ಸ್ಪೋಟಕ 62 ರನ್​ಗಳ ಜತೆಯಾಟವಾಡಿ ತಂಡದ ಮೊತ್ತವನ್ನು ಸುಲಭವಾಗಿ 100ಕ್ಕೇರಿಸಲು ನೆರವಾದರು. ಬಳಿಕ ತರಂಗರನ್ನು ವಿಜಯ್ ಶಂಕರ್ ಬೌಲ್ಡ್ ಮಾಡಿದರೆ, ಉನಾದ್ಕತ್ ಓವರ್​ನಲ್ಲಿ ಸತತ 2 ಸಿಕ್ಸರ್ ಬಾರಿಸಿದ ನಾಯಕ ಥಿಸ್ಸರಾ ಪೆರೇರಾ(15) ವೇಗಿ ಶಾರ್ದೂಲ್ ಓವರ್​ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಚಾಹಲ್​ಗೆ ಕ್ಯಾಚ್ ನೀಡಿದರು. ಆ ಬಳಿಕ ಲಂಕಾದ ರನ್​ರೇಟ್ ಕುಸಿತ ಕಂಡಿತಲ್ಲದೆ, ಅಗ್ರ ಬ್ಯಾಟ್ಸ್ ಮನ್​ಗಳು ಡಗ್​ಔಟ್ ಪರೇಡ್ ನಡೆಸಿದರು. ಜೀವನ್ ಮೆಂಡಿಸ್​ರನ್ನು ವಾಷಿಂಗ್ಟನ್ ಬೌಲ್ಡ್ ಮಾಡಿದರೆ, ಅರ್ಧಶತಕ ಬಾರಿಸಿ ಕೊನೇ ಹಂತದಲ್ಲಿ ಸ್ಪೋಟಕ ಆಟವಾಡುವ ಯೋಜನೆಯಲ್ಲಿದ್ದ ಕುಸಲ್ ಮೆಂಡಿಸ್​ರನ್ನು ಚಾಹಲ್ ಬೆನ್ನಟ್ಟಿದರು.

01 –  ಕೆಎಲ್ ರಾಹುಲ್ ಟಿ20 ಇತಿಹಾಸದಲ್ಲಿ ಹಿಟ್ ವಿಕೆಟ್ ರೂಪದಲ್ಲಿ ಔಟಾದ ಮೊದಲ ಭಾರತೀಯ ಬ್ಯಾಟ್ಸ್​ಮನ್ ಎಂಬ ಕುಖ್ಯಾತಿ ಪಡೆದರು.

Leave a Reply

Your email address will not be published. Required fields are marked *