ಕಳ್ಳಬಟ್ಟಿ ಸಾರಾಯಿ ವಶ

ನಿಡಗುಂದಿ: ನಿಡಗುಂದಿ ತಾಂಡಾ, ದೇವಲಾಪುರದಲ್ಲಿ ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ಅಬಕಾರಿ ಜಿಲ್ಲಾಧಿಕಾರಿ ಎ. ರವಿಶಂಕರ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಯಿತು.

ನಿಡಗುಂದಿ ತಾಂಡಾದಲ್ಲಿ 22 ಲೀಟರ್ ಸಾರಾಯಿ, 100 ಲೀಟರ್ ಬೆಲ್ಲದ ರಸಾಯನ, ದೇವಲಾಪುರದಲ್ಲಿ 4 ಲೀಟರ್ ಸಾರಾಯಿ ಹಾಗೂ 30 ಲೀಟರ್ ಕಚ್ಚಾ ರಾಸಾಯನಿಕಗಳನ್ನು ವಶಪಡಿಸಿ ಕೊಳ್ಳಲಾಯಿತು. ಮಾರಾಟ ಮಾಡುವವರು ಮಾತ್ರ ಸಿಗಲಿಲ್ಲ.

ಗ್ರಾಮಸಭೆ: ನಿಡಗುಂದಿ ತಾಂಡಾದಲ್ಲಿ ಕಳ್ಳಬಟ್ಟಿ ನಿರ್ಮೂಲನೆ ಕುರಿತು ಅಬಕಾರಿ ಅಧಿಕಾರಿಗಳು ಗ್ರಾಮಸಭೆ ನಡೆಸಿದರು.ಅಬಕಾರಿ ಜಿಲ್ಲಾಧಿಕಾರಿ ಎ.ರವಿಶಂಕರ, ಅಬಕಾರಿ ಸಿಪಿಐ ರಾಜು ಎಚ್. ಗೊಂಡೆ ಮಾತನಾಡಿ, ಕಳ್ಳಬಟ್ಟಿಯಿಂದ ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುವುದರ ಜತೆಗೆ ಕುಟುಂಬದ ಸದಸ್ಯರು ಬೀದಿ ಪಾಲಾಗುತ್ತಾರೆ. ಕಳ್ಳಬಟ್ಟಿ ಮಾರಾಟ ಮಾಡುವುದು ಅಪರಾಧ. ಅದಕ್ಕೆ ಕಠಿಣ ಕಾನೂನು ಕ್ರಮಗಳಿವೆ ಎಂದರು.

ಇನ್ನು ಮುಂದೆ ತಾಂಡಾದಲ್ಲಿ ಕಳ್ಳಬಟ್ಟಿ ತಯಾರಿಕೆ, ಮಾರಾಟ ನಡೆಸಿದರೆ ನಾವೇ ಖುದ್ದು ಪೊಲೀಸರಿಗೆ ತಿಳಿಸುವುದಾಗಿ ತಾಂಡಾದ ಹಲವು ಯುವಕರು ಪ್ರತಿಜ್ಞೆ ಮಾಡಿದರು. ಅಬಕಾರಿ ಡಿವೈಎಸ್‌ಪಿ ಜಗದೀಶ ಇನಾಮದಾರ, ಎ.ಎ. ಮುಜಾವರ, ಬಸವರಾಜ ಕಿತ್ತೂರ ಹಾಗೂ ನಿಡಗುಂದಿ ಪಿಎಸ್‌ಐ ಬಸವರಾಜ ಬಿಸನಕೊಪ್ಪ ಇತರರಿದ್ದರು.

Leave a Reply

Your email address will not be published. Required fields are marked *