ತಹಸೀಲ್ದಾರ್ ಕಚೇರಿಗೆ ಎಸಿ ಭೇಟಿ

ನಿಡಗುಂದಿ : ವೃದ್ದಾಪ್ಯ ವೇತನ ಅರ್ಜಿ ಸಲ್ಲಿಸಲು ಹೋದಾಗ ವೃದ್ಧರೊಬ್ಬರು ಮೂರ್ಛೆ ತಪ್ಪಿ ಬಿದ್ದಿದ್ದ ಘಟನೆ ವಿಚಾರಣೆಗಾಗಿ ಶುಕ್ರವಾರ ಕಂದಾಯ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ನಿಡಗುಂದಿ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಹೊಳೆಮಸೂತಿ ಗ್ರಾಮದ ವೃದ್ಧ ಚಂದ್ರಶೇಖರ ಕಳಸಗೊಂಡ (79) ಅವರು ನಿಡಗುಂದಿ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಲು ಬಂದಾಗ ನಿತ್ರಾಣಗೊಂಡು ಗುರುವಾರ ಮೂರ್ಛೆ ತಪ್ಪಿ ಬಿದ್ದಿದ್ದರು. ಈ ಹಿನ್ನೆಲೆ ಉಪವಿಭಾಗಾಧಿಕಾರಿ ಗೆಣ್ಣೂರ ಅವರು ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಶುಕ್ರವಾರ ಬಂದ ಪ್ರತಿಯೊಬ್ಬರ ಸಮಸ್ಯೆ ಆಲಿಸಿದರು.
ನಂತರ ಚಂದ್ರಶೇಖರ ಕಳಸಗೊಂಡ ಅವರ ಪುತ್ರ ಮಲ್ಲಿಕಾರ್ಜುನ ಅವರನ್ನು ಕರೆಯಿಸಿ ಗುರುವಾರ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದರು. ನಂತರ ಕುಟುಂಬದ ಹಿನ್ನಲೆ, ಆರ್ಥಿಕ ಸ್ಥಿತಿಗತಿ ಬಗ್ಗೆ ಪ್ರಶ್ನಿಸಿದ ಗೆಣ್ಣೂರ, ವೃದ್ಧಾಪ್ಯ ವೇತನ ಇರುವುದು ಬಡವರಿಗೆ ಮಾತ್ರ ಎಂದರು.
ಕಳಸಗೊಂಡ ಅವರಿಗೆ ಒಟ್ಟು 8 ಎಕರೆ ನೀರಾವರಿ ಜಮೀನಿದ್ದು, ಕಬ್ಬು ಬೆಳೆಯುತ್ತಾರೆ. ಮೂವರು ಪುತ್ರರಿದ್ದು ಎಲ್ಲರೂ ಸ್ವಯಂ ಉದ್ಯೋಗದಲ್ಲಿ ಸ್ಥಿತಿವಂತರಾಗಿದ್ದಾರೆ. ತಂದೆ, ತಾಯಿಯನ್ನು ಸಾಕುವುದು ಮಕ್ಕಳ ಕೆಲಸ, ವೃದ್ಧಾಪ್ಯ ವೇತನ ಇರುವುದು ಬಡವರಿಗೆ ಮಾತ್ರ ಎಂದ ಉಪ ವಿಭಾಗಾಧಿಕಾರಿ ಈ ಬಗ್ಗೆ ಸ್ಥಾನಿಕ ಪರಿಶೀಲನೆ ನಡೆಸಿ ಕಂದಾಯ ನಿರೀಕ್ಷಕರ ವರದಿ ಪ್ರಕಾರ ವೃದ್ಧಾಪ್ಯ ವೇತನ ಮಂಜೂರು ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಘಟನೆ ಕಚೇರಿಯಲ್ಲಿ ನಡೆದಿಲ್ಲ: ತಹಸೀಲ್ದಾರ್ ಕಚೇರಿ ಪಕ್ಕದ ದೇವಸ್ಥಾನದಲ್ಲಿ ಗುರುವಾರ ವೃದ್ಧ ಮೂರ್ಛೆ ತಪ್ಪಿದ್ದರು. ಆದ್ದರಿಂದ ಅಲ್ಲಿಯ ಜನತೆ ಆಸ್ಪತ್ರೆಗೆ ಸೇರಿಸಿದ್ದಾರೆ. ಕಚೇರಿಯಲ್ಲಾಗಿದ್ದರೆ ಸಿಬ್ಬಂದಿಯೇ ಕೂಡಲೇ ಆಸ್ಪತ್ರೆಗೆ ಸೇರಿಸುತ್ತಿದ್ದರು ಎಂದು ಗೆಣ್ಣೂರ ಸ್ಪಷ್ಟಪಡಿಸಿದರು. ತಹಸೀಲ್ದಾರ್ ಇಸ್ಮಾಯಿಲ್ ಮುಲ್ಕಿಸಿಪಾಯಿ, ಹಿರೇಮಠ ಇತರರು ಇದ್ದರು.

Leave a Reply

Your email address will not be published. Required fields are marked *