ಫ್ರೆಂಚ್​ ಓಪನ್​ನ 3ನೇ ಸುತ್ತಿನಲ್ಲಿ ಸೋಲನುಭವಿಸಿದ ತಂದೆಗೆ ಸಮಾಧಾನ ಹೇಳಿದ ಪುತ್ರ: ವಿಡಿಯೋ ವೈರಲ್​

ಪ್ಯಾರಿಸ್​: ಪ್ರತಿಷ್ಠಿತ ಗ್ರಾಂಡ್​ ಸ್ಲಾಂ ಟೂರ್ನಿಗಳಲ್ಲಿ ಒಂದಾದ ಫ್ರೆಂಚ್ ಓಪನ್​ನ ಮೂರನೇ ಸುತ್ತಿನಲ್ಲಿ ಫ್ರಾನ್ಸ್​ನ ನಿಕೋಲಸ್​ ಮಹತ್​ ಸೋಲನುಭವಿಸಿದರು. ಅವರು ಸೋಲನುಭವಿಸುತ್ತಿದ್ದಂತೆ ಅಂಗಳದೊಳಗೆ ಓಡಿದ ಅವರ 7 ವರ್ಷದ ಪುತ್ರ ತಂದೆಯನ್ನು ಬಿಗಿದಪ್ಪಿ ಸಮಾಧಾನ ಪಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತಂದೆ ಮತ್ತು ಪುತ್ರನ ಪ್ರೀತಿಯನ್ನು ಕೊಂಡಾಡುತ್ತಿದ್ದಾರೆ.

ಮಂಗಳವಾರ ನಿಕೋಲಸ್​ ಮಹತ್​ ಮತ್ತು ಅರ್ಜೆಂಟೀನಾದ ಲಿಯಾನಾರ್ಡೊ ಮಯರ್​ ನಡುವೆ ಮೂರನೇ ಸುತ್ತಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮಹತ್​ 3-6, 7-6, 6-4, 7-6 ಸೆಟ್​ಗಳಿಂದ ಸೋಲನುಭವಿಸಿದರು. ಸೋಲಿನಿಂದ ಹತಾಶೆಗೊಳಗಾದ ಮಹತ್​ ಕಣ್ಣೀರು ಹಾಕುತ್ತಾ ತಮ್ಮ ಬ್ಯಾಗ್​ ತೆಗೆದುಕೊಳ್ಳಲು ತೆರಳಿದರು. ಈ ವೇಳೆ ಅಂಗಳದೊಳಗೆ ಓಡಿ ಬಂದ ಅವರ ಪುತ್ರ ನತಾನೆಲ್​ ತಂದೆಯನ್ನು ಬಿಗಿದಪ್ಪಿಕೊಂಡು ಸಮಾಧಾನಪಡಿಸಿದ್ದಾನೆ. ತಂದೆ-ಮಗನ ಪ್ರೀತಿಯನ್ನು ನೋಡಿದ ಸಹ ಅರ್ಜೆಂಟೀನಾದ ಆಟಗಾರ ಮಯರ್​ ಕಣ್ಣಲ್ಲೂ ನೀರು ಜಿನುಗಿತು. ನೆರೆದಿದ್ದ ಜನರು ಮಹತ್​ಗೆ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

ಈ ದೃಶ್ಯವನ್ನು ಇಟಲಿಯ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇವಲ 24 ಗಂಟೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ವಿಡಿಯೋ ನೋಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿದೆ.

ಫ್ರೆಂಚ್​ ಓಪನ್​ನ ಮೊದಲ ಎರಡು ಸುತ್ತಿನ ಪಂದ್ಯಗಳಲ್ಲಿ ಮಹತ್​ ಗೆಲುವು ಸಾಧಿಸಿದ ನಂತರವೂ ಅವರ ಪುತ್ರ ನತಾನೆಲ್​ ಅಂಗಳದೊಳಗೆ ಓಡಿ ಬಂದು ತನ್ನ ತಂದೆಯನ್ನು ಅಭಿನಂಧಿಸಿದ್ದ.

ನಿಕೋಲಸ್​ ಮಹತ್​ ಅವರು 2010 ವಿಂಬಲ್ಡನ್​ ಟೂರ್ನಿಯಲ್ಲಿ ಅಮೆರಿಕದ ಜಾನ್​ ಇಸ್​ನರ್​ ವಿರುದ್ಧ ಟೆನಿಸ್​ ಇತಿಹಾಸ ಅತ್ಯಂತ ಸುದೀರ್ಘ ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *