ಮೂಡಿಗೆರೆ: ಆರೋಗ್ಯ ಇಲಾಖೆ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಸಿಬ್ಬಂದಿ ಶನಿವಾರದಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತ ಕರ್ತವ್ಯ ಮುಂದುವರಿಸಿದ್ದಾರೆ.
ಪ್ರತಿಭಟನೆ ಕುರಿತು ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯಾ ನಾಯ್ಕ ಮಾತನಾಡಿ, 20 ವರ್ಷದಿಂದ ಸರ್ಕಾರ ಕಡಿಮೆ ವೇತನ ನೀಡಿ ದುಡಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ 28,258 ಸಿಬ್ಬಂದಿ, ಮೂಡಿಗೆರೆ ತಾಲೂಕಿನಲ್ಲಿ 110 ಗುತ್ತಿಗೆ ಸಿಬ್ಬಂದಿ ಇದ್ದಾರೆ. ಈ ನೌಕರರಿಗೆ 10 ರಿಂದ 15 ಸಾವಿರ ರೂ. ಮಾತ್ರ ವೇತನ ನೀಡುತ್ತಿದೆ. ಆರೋಗ್ಯ ಇಲಾಖೆಯಿಂದ ಇತರ ಯಾವುದೆ ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರು.
ಕರೊನಾ ವೇಳೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 40 ದಿನ ಪ್ರತಿಭಟನೆ ನಡೆಸಿದಾಗ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಭಟನೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಮತ್ತು ದಿನೇಶ್ ಗುಂಡೂರಾವ್ ನಮ್ಮೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸುವ ಭರವಸೆ ನೀಡಿದ್ದರು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೂ ಕಾಯಂಗೊಳಿಸುವುದಾಗಿ ಘೋಷಿಸಿತ್ತು. ಅವರ ಪಕ್ಷ ಅಧಿಕಾರದಲ್ಲಿದೆ. ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಕೂಡ ನಮ್ಮ ಸೇವೆ ಕಾಯಂಗೊಳಿಸಿಲ್ಲ. ಹಾಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ರೋಗಿಗಳಿಗೆ ತೊಂದರೆ ಆಗಬಾರದೆಂದು ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಸೇವೆ ಕಾಯಂಗೊಳಿಸದಿದ್ದಲ್ಲಿ ಆ.22ರವರೆಗೆ ಪ್ರತಿಭಟನೆ ಮುಂದುವರಿಸಿ ನಂತರ ಚಿಕ್ಕಮಗಳೂರಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗುತ್ತಿಗೆ ನೌಕರರಾದ ಪ್ರದೀಪ್, ವಾಣಿ, ವಿನುತಾ, ಪರ್ಝಾನಾ ಭಾನು, ಪ್ರಮೀಳಾ, ಕವಿತಾ, ಲಲಿತಮ್ಮ ಇತರರಿದ್ದರು.