ಬೆಳ್ಳಂದೂರು ಕೆರೆ ನಿರ್ವಹಣೆ ವಿಫಲ: ರಾಜ್ಯ ಸರ್ಕಾರ, ಬಿಬಿಎಂಪಿಗೆ ದಂಡ ವಿಧಿಸಿದ ಎನ್‌ಜಿಟಿ

ಬೆಂಗಳೂರು: ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ಮಹತ್ವದ ತೀರ್ಪು ನೀಡಿದ್ದು, ಕೆರೆ ನಿರ್ವಹಣೆಯಲ್ಲಿ ವಿಫಲವಾದ ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿದೆ.

ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠವು, ರಾಜ್ಯ ಸರ್ಕಾರಕ್ಕೆ 50 ಕೋಟಿ ರೂ. ಹಾಗೂ ಬಿಬಿಎಂಪಿಗೆ 25 ಕೋಟಿ‌ ರೂಪಾಯಿ ದಂಡವನ್ನು ವಿಧಿಸಿದೆ. ಅಲ್ಲದೆ, ರಾಜ್ಯ ಸರ್ಕಾರವು 500 ಕೋಟಿ ರೂ.ಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮೀಸಲು ನಿಧಿಗೆ ನೀಡಲು ಸೂಚಿಸಿದೆ. ಮೀಸಲು ನಿಧಿ ಹಣವನ್ನು ಬೆಳ್ಳಂದೂರು ಕೆರೆ ಅಭಿವೃದ್ಧಿ ಬಿಟ್ಟು ಬೇರೆ ಯಾವುದಕ್ಕೂ ಬಳಸಬಾರದು ಎಂದು ಖಡಕ್‌ ಆದೇಶ ನೀಡಿದೆ.

ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಅಭಿವೃದ್ಧಿಯಲ್ಲಿಯೂ ಕೂಡ ಈ ಆದೇಶ ಪಾಲಿಸಬೇಕು. ಕೇವಲ ಬೆಳ್ಳಂದೂರು ಮಾತ್ರ ಅಲ್ಲ. ತಮ್ಮ ಜವಾಬ್ದಾರಿ ನಿಭಾಯಿಸದಿದ್ದರೆ ಮುಂದೆ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಅಧಿಕಾರಿಗಳ ಸೇವಾ ಪುಸ್ತಕದಲ್ಲಿ ಬರೆಯಲು ಸೂಚಿಸಿದ್ದು, ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಉನ್ನತ ಸಮಿತಿ ನೀಡಿರುವ ಶಿಫಾರಸು ಪಾಲಿಸಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಹೇಳಿದೆ.

ಬೆಳ್ಳಂದೂರು ಕೆರೆ ರಕ್ಷಣೆ ಆಗಿಲ್ಲ. ರಾಜ್ಯ ಸರ್ಕಾರ, ಬಿಬಿಎಂಪಿಯಿಂದ ನಿರ್ಲಕ್ಷ್ಯ ವಹಿಸಲಾಗಿದೆ. ರಾಜಕಾಲುವೆ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿದೆ. ಜಲಮಾಲಿನ್ಯ ಮಾಡುವುದು ಅಪರಾಧ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕರ್ತವ್ಯವಾಗಿದ್ದು, ಇದನ್ನು ಸಂವಿಧಾನದಲ್ಲಿ ಕೂಡ ಹೇಳಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂದು ಚಾಟಿ ಬೀಸಿದ್ದಾರೆ.

ಎನ್‌ಜಿಟಿ ಆದೇಶ ಪಾಲನೆ ಉಸ್ತುವಾರಿಗೆ ಸಮಿತಿ ರಚಿಸಲಾಗಿದ್ದು, ನಿವೃತ್ತಿ ನ್ಯಾ. ಸಂತೋಷ್ ಹೆಗಡೆ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ವೆಬ್‌ಸೈಟ್‌ ರಚಿಸಲು ಸಮಿತಿಗೆ ನಿರ್ದೇಶನ ನೀಡಿದ್ದು, ಜನರು ವೆಬ್‌ಸೈಟ್‌ನಲ್ಲಿ ದೂರು, ಸಲಹೆ ನೀಡಬಹುದು.
ತೀರ್ಪಿಗೆ ಬಿಬಿಎಂಪಿ ವಿಪಕ್ಷ ಸ್ವಾಗತ

ಎನ್​ಜಿಟಿ ತೀರ್ಪನ್ನು ಬಿಬಿಎಂಪಿಯ ವಿಪಕ್ಷ ಸ್ವಾಗತಿಸಿದ್ದು, ಎನ್​ಜಿಟಿ ಈ ರೀತಿ ದಂಡ ಹಾಕಿರುವುದು ಎರಡನೇ ಬಾರಿ. ಇದು ಇಲ್ಲಿನ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಹೇಳಿದ್ದಾರೆ. ಕೂಡಲೇ ಸಿಎಂ, ಡಿಸಿಎಂ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)