ಎತ್ತಿನಹೊಳೆ ಯೋಜನೆಗೆ ಎನ್‌ಜಿಟಿ ಷರತ್ತುಬದ್ಧ ಅನುಮತಿ

ವಿಜಯವಾಣಿ ಸುದ್ದಿಜಾಲ ನವದೆಹಲಿ
ನೇತ್ರಾವತಿ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರಕ್ಕೆ ತಿರುಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಷರತ್ತುಬದ್ಧ ಅನುಮತಿ ನೀಡಿದ್ದು, ಅರ್ಜಿದಾರ ಎಸ್.ಟಿ.ಸೋಮಶೇಖರ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ವಜಾಗೊಳಿಸಿದೆ.

ಇದರಿಂದ ನೇತ್ರಾವತಿ ಉಳಿಸಿ ಹೋರಾಟಕ್ಕೆ ಹಿನ್ನಡೆಯಾಗಿದ್ದರೆ, ಚಿಕ್ಕಬಳ್ಳಾಪುರ, ಕೋಲಾರ ಭಾಗಕ್ಕೆ ಕುಡಿವ ನೀರು ಪೂರೈಕೆ ಮಾಡಬೇಕೆಂಬ ರಾಜ್ಯ ಸರ್ಕಾರದ ಉದ್ದೇಶಕ್ಕೆ ಕಾನೂನಾತ್ಮಕ ಸಮ್ಮತಿ ಸಿಕ್ಕಂತಾಗಿದೆ. ಯೋಜನೆ ಕಾಮಗಾರಿ ಪ್ರದೇಶಗಳಲ್ಲಿ ಪರಿಸರ ಕಾಯ್ದೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಸೂಚನೆ ನೀಡಿರುವ ನ್ಯಾಯಾಧಿಕರಣ, ಯೋಜನೆಗಳಲ್ಲಿನ ನಿಯಮ ಉಲ್ಲಂಘನೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುವ ಬಗ್ಗೆ ಅಧ್ಯಯನ ನಡೆಸಿ, ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಸಚಿವಾಲಯ ಮುಕ್ತ ಅವಕಾಶ ಹೊಂದಿದೆ ಎಂದು ಹೇಳಿದೆ.

ಯೋಜನೆಯಿಂದ ಪರಿಸರ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಆದರೆ ಈ ಅಧ್ಯಯನ ವರದಿಯಲ್ಲಿ ತಜ್ಞರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಇದರಿಂದಾಗಿ ಯಾವುದೇ ಸ್ಪಷ್ಟತೆ ಸಿಗುವುದಿಲ್ಲ ಮತ್ತು ಅದನ್ನು ಕಾನೂನಾತ್ಮಕವಾಗಿಯೂ ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಯೋಜನೆಗೆ ಅನುಮತಿ ನೀಡಬಾರದಿತ್ತು ಎಂಬ ಅರ್ಜಿದಾರರ ದಾಖಲಾತಿಗಳನ್ನು ಒಪ್ಪಲಾಗುವುದಿಲ್ಲ ಎಂದು ನ್ಯಾ.ಆದರ್ಶ ಕುಮಾರ್ ಗೋಯೆಲ್, ನ್ಯಾ.ಎಸ್.ಪಿ.ವಾಂಗ್ಡಿ, ರಾಮಕೃಷ್ಣನ್ ಮತ್ತು ತಜ್ಞ ಸದಸ್ಯ ನಾಗಿನ್ ನಂದಾ ಅವರನ್ನೊಳಗೊಂಡ ನ್ಯಾಯಾಧಿಕರಣ ಅಭಿಪ್ರಾಯಪಟ್ಟಿದೆ.

ಎತ್ತಿನಹೊಳೆ ಯೋಜನೆಯಿಂದಾಗಿ ವ್ಯಾಪಕ ಅರಣ್ಯ, ಜೀವ ಜಲಚರಗಳು ನಾಶಗೊಂಡು, ಪರಿಸರಕ್ಕೆ ಮಾರಣಾಂತಿಕ ಎನಿಸಿಕೊಳ್ಳಲಿದೆ. ಎಲ್ಲ ಪರಿಸರ ಕಾನೂನುಗಳನ್ನು ಗಾಳಿಗೆ ತೂರಿ ಸರ್ಕಾರ ಯೋಜನೆಗೆ ಚಾಲನೆ ನೀಡಿದೆ ಎಂದು ಅರ್ಜಿದಾರರು ಕ್ಯಾತೆ ತೆಗೆದಿದ್ದರು. ಈ ಬಗ್ಗೆ ವಿಸ್ತೃತ ವಿಚಾರಣೆ ನಡೆದಿತ್ತು ಮತ್ತು ರಾಜ್ಯ ಸರ್ಕಾರ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿತ್ತು.

ಅಂತಿಮ ತೀರ್ಪು ಪ್ರಕಟ: ಈ ತೀರ್ಪಿಗೆ ಮುನ್ನ 2017ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ನೀಡಿದ್ದ ನ್ಯಾ.ಜಾವದ್ ರಹೀಂ ನೇತೃತ್ವದ ನ್ಯಾಯಪೀಠ, ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ ಪೀಠದ ಮತ್ತೋರ್ವ ಸದಸ್ಯ ಷರತ್ತುಗಳೇನೇನು ಎಂಬುದನ್ನು ಪ್ರಕಟಿಸುವ ಮುನ್ನವೇ ನಿವೃತ್ತಿಯಾಗಿದ್ದರು. ಹೀಗಾಗಿ ಪ್ರಕರಣದ ಮರು ವಿಚಾರಣೆ ನಡೆಸಲು ನ್ಯಾಯಾಧಿಕರಣ ನಿರ್ಧರಿಸಿತ್ತು. ಈಗ ನ್ಯಾ.ಎ.ಕೆ. ಗೋಯೆಲ್ ನೇತೃತ್ವದ ನ್ಯಾಯಾಧಿಕರಣ ತನ್ನ ಅಂತಿಮ ತೀರ್ಪು ಪ್ರಕಟಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಅವಕಾಶ ಅರ್ಜಿದಾರರ ಮುಂದಿದೆ.

Leave a Reply

Your email address will not be published. Required fields are marked *