ಬೆಂಗಳೂರು ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಕೇಳಿದ್ದ ಪರಿಣಾಮ, ಎಚ್ಚೆತ್ತುಕೊಂಡಿರುವ ರಾಜ್ಯಸರ್ಕಾರ ಮುಂದಿನ ಬಾರಿಯ ಸಿಇಟಿಗೆ ಎನ್‌ಸಿಇಆರ್‌ಟಿ ಪಠ್ಯವನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ಧರಿದೆ.
ಈ ಕುರಿತು ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಎನ್‌ಸಿಇಆರ್‌ಟಿ ಪಠ್ಯವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಸಿಇಟಿ ಪಠ್ಯದ ಬಗ್ಗೆ ಸ್ಪಷ್ಟತೆ ನೀಡುತ್ತೇವೆ. ಆದರೆ ಎನ್‌ಸಿಇಆರ್‌ಟಿ ಪಠ್ಯದಲ್ಲಿನ ಅಂಶಗಳನ್ನು ಬಳಸಿಕೊಂಡು ಮಕ್ಕಳು ತಮ್ಮ ವಿವೇಚಣೆ ಬಳಸಿ ಉತ್ತರ ನೀಡುವ ಪ್ರಶ್ನೆಗಳನ್ನು ಅಳವಡಿಸುವಂತೆ ಮಾರ್ಗಸೂಚಿ ರೂಪಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು ಪಿಯು ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಲಾಗುವುದು. ಪಠ್ಯಕ್ರಮವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಬಳಿಕ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು. ಅದಾದ ನಂತರವೇ ಅಂತಿಮಗೊಳಿಸಲಾಗುವುದು ಎಂದರು.