ಹಾವೇರಿ ಮದುವೆ ಮಂಟಪದಲ್ಲಿ ನವದಂಪತಿ ಜತೆಗೂಡಿ ಮತ್ತೊಮ್ಮೆ ಮೋದಿ ಸಂಭ್ರಮಾಚರಣೆ

ಹಾವೇರಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ. ಅದರಂತೆ ಅದೇತಾನೆ ಸಪ್ತಪದಿ ತುಳಿದು ಸತಿಪತಿಯಾದವರು ಕೂಡ ತಮ್ಮ ಕುಟುಂಬಸ್ಥರು ಮತ್ತು ಬಂಧುಬಳಗದೊಂದಿಗೆ ಕುಣಿದುಕುಪ್ಪಳಿಸಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಿದ್ದಕ್ಕೆ ಸಂಭ್ರಮ ಆಚರಿಸಿದ್ದು ವಿಶೇಷವಾಗಿತ್ತು.

ಹಾವೇರಿಯ ಶಿವಶಕ್ತಿ ಪ್ಯಾಲೇಸ್​ ಕಲ್ಯಾಣ ಮಂಟಪದಲ್ಲಿ ಗುರುವಾರ ವೀರೇಶ್​ ಹಿರೇಮಠ ಮತ್ತು ನಯನಾ ಹಿರೇಮಠ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮದುವೆ ಶಾಸ್ತ್ರಗಳು ಸಾಗಿರುವಂತೆ ಇಂದು ನಡೆದ ಮತ ಎಣಿಕೆ ಪ್ರಕ್ರಿಯೆ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಅದರಂತೆ, ದೇಶದ ನಿರೀಕ್ಷೆಯಂತೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಹಿರೇಮಠ ದಂಪತಿಯ ಸಂತಸ ಇಮ್ಮಡಿಗೊಂಡಿತು.

ಬಂಧುಬಳಗದವರು, ಸ್ನೇಹಿತರ ಜತೆಗೂಡಿ ನವದಂಪತಿ ಸಂಭ್ರಮಾಚರಣೆಗೆ ಮುಂದಾದರು. ಸಂಸದರಾಗಿ ಆಯ್ಕೆಯಾದ ಶಿವಕುಮಾರ ಉದಾಸಿ ಹಾಗೂ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ದಂಪತಿ, ತಮ್ಮ ಮದುವೆಯ ದಿನ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *