ಉಡುಪಿಯಲ್ಲಿ ದೇಶದ ಎರಡನೇ ಅತಿ ದೊಡ್ಡ ಟೆನಿಸ್ ಸ್ಟೇಡಿಯಂ

ಅವಿನ್ ಶೆಟ್ಟಿ ಉಡುಪಿ
ಅಜ್ಜರಕಾಡಿನಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಶದ ಎರಡನೇ ಅತಿ ದೊಡ್ಡ ಒಳಾಂಗಣ ಟೆನಿಸ್ ಕ್ರೀಡಾಂಗಣದ ಕಾಮಗಾರಿ ಶೇ.80 ರಷ್ಟು ಮುಗಿದಿದ್ದು, ನವೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ನಗರದ ಅಜ್ಜರಕಾಡು, ಮಹಾತ್ಮ ಗಾಂಧಿ ಕ್ರೀಡಾಂಗಣ ಮುಂಭಾಗದ ಈಜುಕೊಳದ ಪಕ್ಕದಲ್ಲಿ 1.5 ಎಕರೆ ವಿಶಾಲ ಜಾಗದಲ್ಲಿ 3.70 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿಂಥೆಟಿಕ್ ಕೋರ್ಟ್ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ.

ಕ್ರೀಡಾಂಗಣದ ಕಾಮಗಾರಿ ನಿರ್ಮಿತಿ ಸಂಸ್ಥೆ ನಿರ್ವಹಿಸುತ್ತಿದೆ. ಸಿಂಥೆಟಿಕ್ ಕೋರ್ಟ್‌ನ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದೆ. ಈ ಯೋಜನೆ 2015 ನ.16ರಂದು ಶಿಲಾನ್ಯಾಸಗೊಂಡಿತ್ತು. ಅನುದಾನ ಬಿಡುಗಡೆ ವಿಳಂಬದಿಂದ ಆರಂಭದಲ್ಲಿ ಕಾಮಗಾರಿ ಹಿನ್ನಡೆಯಾಗಿತ್ತು. ಬಳಿಕ ಕಾಮಗಾರಿ ವೇಗ ಪಡೆದುಕೊಂಡಿದೆ.

ರಾಜ್ಯ, ರಾಷ್ಟ್ರೀಯ ಮಟ್ಟದ ಪಂದ್ಯಾಟ: ಬ್ರಹ್ಮಾವರ ಎಸ್‌ಎಂಎಸ್ ಕಾಲೇಜು ಸೇರಿದಂತೆ, ಅಂಬಲಪಾಡಿ, ಉಡುಪಿಯಲ್ಲಿ ಟೆನಿಸ್ ಕ್ರೀಡಾಪಟುಗಳಿದ್ದಾರೆ. ಟೆನಿಸ್‌ಪಟುಗಳಿಗೆ ಅಭ್ಯಾಸಕ್ಕೆ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಅನುಕೂಲವಾಗಲಿದೆ. ಅಲ್ಲದೆ ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾಟಗಳನ್ನು ಇಲ್ಲಿ ಆಯೋಜಿಸಬಹುದು. ಹಲವು ಸ್ಥಳಗಳಲ್ಲಿ ಹೊರಾಂಗಣ ಸಿಂಥೆಟಿಕ್ ಟೆನಿಸ್ ಕೋರ್ಟ್‌ಗಳಿವೆ. ಅಲ್ಲಿ ಮಳೆಗಾಲದಲ್ಲಿ ಟೆನಿಸ್ ಪ್ರಾಕ್ಟಿಸ್ ಮಾಡುವುದು ಕಷ್ಟ. ಈ ನಿಟ್ಟಿನಲ್ಲಿ ಉಡುಪಿಯ ಈ ಒಳಾಂಗಣ ಟೆನಿಸ್ ಕೋರ್ಟ್ ಮಹತ್ವ ಪಡೆದಿದೆ.

ಕ್ರೀಡಾಂಗಣದ ವಿಶೇಷತೆ: ದೆಹಲಿ ನಂತರ ಉಡುಪಿಯಲ್ಲಿ ದೇಶದ 2ನೇ, ರಾಜ್ಯದ ಪ್ರಥಮ ಅಂತಾರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಟೆನಿಸ್ ಕೋರ್ಟ್ ಇದಾಗಲಿದೆ. ಎರಡು ಸಿಂಥೆಟಿಕ್ ಕೋರ್ಟ್ ಒಳಗೊಂಡು, 50 ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿದೆ. ಕ್ರೀಡಾಂಗಣದೊಳಗೆ ಬಟ್ಟೆ ಬದಲಾವಣೆ ಕೊಠಡಿ, ತರಬೇತುದಾರರ ಕೊಠಡಿ, ವಿಶ್ರಾಂತಿ ಕೊಠಡಿ, ಶೌಚಗೃಹ, ಕುಡಿಯುವ ನೀರು ಸೌಲಭ್ಯ ಇರುತ್ತದೆ. ಒಂದು ಬಾರಿ 500 ಮಂದಿ ಪಂದ್ಯ ವೀಕ್ಷಿಸಬಹುದಾದ ಗ್ಯಾಲರಿ ವ್ಯವಸ್ಥೆ ಇದರಲ್ಲಿದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ದೆಹಲಿ ನಂತರ ಉಡುಪಿಯಲ್ಲಿ ಒಳಾಂಗಣ ಟೆನಿಸ್ ಕ್ರೀಡಾಂಗಣ ನಿರ್ಮಾಣಗೊಳ್ಳುತ್ತಿದೆ. 3.70 ಕೋಟಿ ರೂ.ವೆಚ್ಚದಲ್ಲಿ 2 ಸಿಂಥೆಟಿಕ್ ಕೋರ್ಟ್ ಒಳಗೊಂಡ ಸುಸಜ್ಜಿತ ಕ್ರೀಡಾಂಗಣದ ಕಾಮಗಾರಿ ಹಂತಿಮ ಹಂತದಲ್ಲಿದ್ದು, ನವಂಬರ್‌ಗೆ ಪೂರ್ಣಗೊಳ್ಳಲಿದೆ.
|ಅರುಣ್ ಕುಮಾರ್, ನಿರ್ದೇಶಕ, ನಿರ್ಮಿತಿ ಕೇಂದ್ರ