ಸುದ್ದಿವಾಹಿನಿ ವೀಕ್ಷಕರ ಸಂಖ್ಯೆ ಹೆಚ್ಚಿಸಿದ ಎಲೆಕ್ಷನ್ ಕೌಂಟಿಂಗ್

ಬೆಂಗಳೂರು: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಲೋಕಸಭೆ ಚುನಾವಣಾ ಫಲಿತಾಂಶದ ದಿನದಂದು ಸುದ್ದಿವಾಹಿನಿ ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದ್ದು, ದಕ್ಷಿಣ ಭಾರತದ ಟೆಲಿವಿಷನ್ ವೀಕ್ಷಕರ ಪೈಕಿ ಶೇ. 65 ವೀಕ್ಷಕರು ಸುದ್ದಿವಾಹಿನಿಗಳನ್ನು ವೀಕ್ಷಿಸಿದ್ದಾರೆ.

ಬ್ರಾಡ್​ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಇಂಡಿಯಾದ ಅಂಕಿ-ಅಂಶಗಳ ಪ್ರಕಾರ ದಕ್ಷಿಣ ಭಾರತದ 4 ರಾಜ್ಯಗಳಲ್ಲಿರುವ 25.85 ಕೋಟಿ ಟಿವಿ ವೀಕ್ಷಕರಲ್ಲಿ ಚುನಾವಣಾ ಫಲಿತಾಂಶದ ದಿನವಾದ ಮೇ 23ರಂದು 16.73 ಕೋಟಿ (ಶೇ. 65) ಜನ ಸುದ್ದಿವಾಹಿನಿಗಳನ್ನು ವೀಕ್ಷಿಸಿದ್ದಾರೆ. ಇದು ಪ್ರತಿನಿತ್ಯದ ವೀಕ್ಷಕರ ಸಂಖ್ಯೆಗೆ ಹೋಲಿಸಿದರೆ ಶೇ.67 ಏರಿಕೆ ಕಂಡಿದೆ. ಹಿಂದಿನ 8 ವಾರಕ್ಕೆ ಹೋಲಿಸಿದರೆ ಶೇ.416 ಹೆಚ್ಚಳವಾಗಿದೆ.

ಮತ ಎಣಿಕೆ ಪ್ರಕ್ರಿಯೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದರೂ 6.30ರಿಂದಲೇ ಸುದ್ದಿವಾಹಿನಿಗಳು ವೀಕ್ಷಣೆಗೊಳಪಟ್ಟಿವೆ. ಬೆಳಗ್ಗೆ 8ರಿಂದ 12 ಗಂಟೆ ಅವಧಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಸುದ್ದಿವಾಹಿನಿ ವೀಕ್ಷಿಸಿದ್ದಾರೆ. 41ರಿಂದ 50 ವಯೋಮಾನದ ಹಾಗೂ 31ರಿಂದ 40 ವಯಸ್ಸಿನ ವೀಕ್ಷಕರ ಸಂಖ್ಯೆ ಕ್ರಮವಾಗಿ 12.5 ಕೋಟಿ ಹಾಗೂ 12.4 ಕೋಟಿ ಆಗಿದೆ ಎಂದು ಬಾರ್ಕ್ ತಿಳಿಸಿದೆ.

ರಾಜ್ಯವಾರು ಅಂಕಿ-ಅಂಶ: ಆಂಧ್ರಪ್ರದೇಶ/ ತೆಲಂಗಾಣದಲ್ಲಿ 8 ವಾರದ ಹಿಂದೆ 5.3 ಕೋಟಿ ವೀಕ್ಷಣೆಗೊಳಪಟ್ಟಿದ್ದ ಸುದ್ದಿವಾಹಿನಿಗಳು ಮೇ 23ರಂದು 27.2 ಕೋಟಿ ವೀಕ್ಷಣೆಗೊಳಪಡುವ ಮೂಲಕ ಶೇ.412 ಏರಿಕೆ ಕಂಡಿದೆ.ಕರ್ನಾಟಕದಲ್ಲಿ 3.8 ಕೋಟಿಯಿಂದ 18.4 ಕೋಟಿಗೆ ಏರಿಕೆಯಾಗಿದೆ. ತಮಿಳುನಾಡು/ಪಾಂಡಿಚೆರಿಯಲ್ಲಿ 3.2 ಕೋಟಿ ಇದ್ದ ವೀಕ್ಷಣೆಯ ಸಂಖ್ಯೆ 15.5 ಕೋಟಿಗೆ (ಶೇ. 390) ಏರಿಕೆಯಾಗಿದ್ದರೆ, ಕೇರಳದಲ್ಲಿ 1.7 ಕೋಟಿಯಿಂದ 11 ಕೋಟಿ (ಶೇ. 552) ದಾಟಿದೆ. ದಕ್ಷಿಣ ಭಾರತದಲ್ಲಿ ಕಳೆದ 4 ವಾರಗಳಲ್ಲಿ ಸುದ್ದಿವಾಹಿನಿಗಳನ್ನೇ ವೀಕ್ಷಿಸದವರ ಪೈಕಿ ಮೇ 23ರಂದು ಶೇ. 30 ವೀಕ್ಷಕರು ಸುದ್ದಿವಾಹಿನಿಗಳನ್ನು ಟ್ಯೂನ್ ಮಾಡಿದ್ದಾರೆ. ತಮಿಳುನಾಡು/ಪಾಂಡಿಚೆರಿಯಲ್ಲಿ ಶೇ.34, ಆಂಧ್ರಪ್ರದೇಶ/ತೆಲಂಗಾಣದಲ್ಲಿ ಶೇ. 30, ಕೇರಳದಲ್ಲಿ ಶೇ.28 ಹಾಗೂ ಕರ್ನಾಟಕದಲ್ಲಿ ಶೇ.27 ಮಂದಿ ಹೊಸದಾಗಿ ಸುದ್ದಿವಾಹಿನಿಗಳನ್ನು ವೀಕ್ಷಿಸಿದ್ದಾರೆ.

ಸರಾಸರಿ ವೀಕ್ಷಣೆ ಅವಧಿ

ಕಳೆದ ಎಂಟು ವಾರಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಲ್ಲಿ ಸರಾಸರಿ ವೀಕ್ಷಣೆ ಅವಧಿಯಲ್ಲಿ ಶೇ 209 ಏರಿಕೆಯಾಗಿದ್ದು, 40 ನಿಮಿಷ 39 ಸೆಕೆಂಡ್ ವೀಕ್ಷಣೆ ಅವಧಿ 2 ಗಂಟೆ 5 ನಿಮಿಷ 34 ಸೆಕೆಂಡ್​ಗೆ ಏರಿಕೆಯಾಗಿದೆ.