ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು 2019ರ ಜನವರಿ 1ರಂತೆ ವಿಶೇಷ ಪರಿಷ್ಕರಣೆ ನಡೆಸಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್​ ತಿಳಿಸಿದ್ದಾರೆ.
ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಜತೆ ನಡೆದ ಅಂತಿಮ ಮತದಾರರ ಪಟ್ಟಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4,88,510 ಪುರುಷ, 4,88,707 ಮಹಿಳೆ ಸೇರಿ 9,77,217 ಮತದಾರರಿದ್ದಾರೆ. ಈ ಪೈಕಿ ಸುರಪುರದಲ್ಲಿ 2,73,604, ಶಹಾಪುರ 2,26,226, ಯಾದಗಿರಿಯಲ್ಲಿ 2,34,747 ಹಾಗೂ ಗುರುಮಠಕಲ್ ವಿಧಾನಸಭೆ ಕ್ಷೇತ್ರದಲ್ಲಿ 2,42,640 ಮತದಾರರಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಒಬ್ಬ ಮಹಿಳೆ ಸೇರಿ 80 ಸೇವಾ ಮತದಾರರು ಇದ್ದಾರೆ. ಈ ವರ್ಷ 16,093 ಯುವ ಮತದಾರರು ಹೊಸದಾಗಿ ನೋಂದಾಯಿಸಿದ್ದಾರೆ. ಮತದಾರರ ಸೇರ್ಪಡೆ ಮತ್ತು ಪರಿಷ್ಕರಣೆ ನಿರಂತರವಾಗಿರುತ್ತದೆ. ಆದ್ದರಿಂದ ರಾಜಕೀಯ ಪಕ್ಷಗಳ ಮುಖಂಡರು ಹೆಸರು ನೋಂದಾಯಿಸದವರ ವಿವರವನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ ಗಮನಕ್ಕೆ ತರಬಹುದು ಎಂದರು.
ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಅಳವಡಿಸುವ ಕಾರ್ಯ ಶೇ.99.91 ಸಾಧಿಸಲಾಗಿದೆ. ಸುರಪುರ ಕ್ಷೇತ್ರದಲ್ಲಿ 234, ಶಹಾಪುರ 93, ಯಾದಗಿರಿ 63, ಗುರುಮಠಕಲ್ ಕ್ಷೇತ್ರದಲ್ಲಿ 443 ಮತದಾರರ ಭಾವಚಿತ್ರ ಅಳವಡಿಸುವ ಕಾರ್ಯ ಬಾಕಿ ಇದೆ. ಈ ಕಾರ್ಯಕ್ಕೆ ರಾಜಕೀಯ ಪಕ್ಷಗಳ ಸಹಕಾರ ಬೇಕು. ಅಂಗವಿಕಲ ಮತದಾರರಿಗೆ ಲೋಕಸಭಾ ಚುನಾವಣೆಯಲ್ಲಿ ವೀಲ್ ಚೇರ್ ವ್ಯವಸ್ಥೆ ಜತೆಗೆ ವಾಹನ ವ್ಯವಸ್ಥೆಯೂ ಮಾಡಬಹುದು. ಆದ್ದರಿಂದ ಅಂಗವಿಕಲ ಮತದಾರರನ್ನು ಗುರುತಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಮಾತನಾಡಿ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಇಂಜಿನಿಯರ್ಗಳು ಪ್ರಾಥಮಿಕ ತಪಾಸಣೆ ಮಾಡಿದ ವಿದ್ಯುನ್ಮಾನ ಮತಯಂತ್ರ ಹಾಗೂ ಮತ ಖಾತ್ರಿ ಯಂತ್ರ (ವಿವಿ ಪ್ಯಾಟ್)ಗಳನ್ನು ಬಳಸಿ ಅಣಕು ಮತದಾನ (ಮಾಕ್ ಪೋಲ್) ಮಾಡಲಾಗಿದೆ. ಮುಖ್ಯವಾಗಿ ಎಲ್ಲ ರಾಜಕೀಯ ಪಕ್ಷದವರು ಬೂತ್ ಲೆವಲ್ ಏಜೆಂಟ್ (ಬಿಎಲ್ಎ)ರನ್ನು ನೇಮಿಸುವ ಮೂಲಕ ಚುನಾವಣೆ ಪ್ರಕ್ರಿಯೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಚುನಾವಣೆ ಶಾಖೆ ಶಿರಸ್ತೆದಾರ ಪರಶುರಾಮ, ಆಲಂಭಾಷಾ, ಖಲೀಲ್ಸಾಬ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವರಾಜ ದಾಸನಕೇರಿ, ಜೆಡಿಎಸ್ನ ಬಾಲಪ್ಪ ಚಿಕ್ಕಮೇಟಿ, ಸಿಕಂದರ್, ಶಾಂತಪ್ಪ ಡಿ.ಜಾಧವ್, ಮೊಹ್ಮದ್ ಯಾಕೂಬ್ ಉಪಸ್ಥಿತರಿದ್ದರು. ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಮುಖಂಡರಿಗೆ ವಿತರಿಸಲಾಯಿತು.