ತರಬೇತಿಗಾಗಿ ಪಾಕ್​ಗೆ ತೆರಳಲು ವಾಘಾ ಗಡಿ ಬಳಸುತ್ತಿರುವ ಉಗ್ರರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಸಂಘಟನೆಗಳಿಗೆ ಹೊಸದಾಗಿ ಸೇರ್ಪಡೆಯಾಗುವ ಉಗ್ರರು ತರಬೇತಿಗಾಗಿ ಪಾಕಿಸ್ತಾನಕ್ಕೆ ತೆರಳಲು ವಾಘಾ ಗಡಿಯನ್ನು ಬಳಸುತ್ತಿದ್ದಾರೆ ಎಂಬುದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ತನಿಖೆಯಿಂದ ತಿಳಿದುಬಂದಿದೆ.

ಜಮ್ಮುವಿನ ನಗ್ರೋತಾ ಸೇನಾ ನೆಲೆಯ ಮೇಲೆ ನಡೆದ ದಾಳಿಯ ತನಿಖೆ ನಡೆಸುತ್ತಿರುವ ಎನ್​ಐಎಗೆ ಉಗ್ರರು ಪಾಕಿಸ್ತಾನಕ್ಕೆ ತೆರಳಲು ಹೊಸ ಮಾರ್ಗ ಕಂಡುಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಉಗ್ರರು ಅಸಲಿ ದಾಖಲಾತಿಗಳೊಂದಿಗೆ ಪಾಕಿಸ್ತಾನಕ್ಕೆ ತೆರಳುತ್ತಾರೆ. ಅಲ್ಲಿ ಅವರು ತರಬೇತಿ ಪಡೆದ ನಂತರ ಗಡಿ ನಿಯಂತ್ರಣ ರೇಖೆ ದಾಟಿ ಜಮ್ಮು ಮತ್ತು ಕಾಶ್ಮೀರದೊಳಗೆ ಪ್ರವೇಶಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರ ಶಿಫಾರಸಿನ ಮೇರೆಗೆ ವೀಸಾ ಪಡೆದಿದ್ದ ಜೈಷ್​ ಎ ಮೊಹಮ್ಮದ್​ನ ಉಗ್ರ ಮೊಹಮ್ಮದ್​ ಆಷಿಕ್​ ಬಾಬಾ ಎಂಬಾತ ಹಲವು ಬಾರಿ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದ. ಅಲ್ಲಿ ಪಾಕ್​ ಆಕ್ರಮಿತ ಕಾಶ್ಮೀರಕ್ಕೂ ಭೇಟಿ ನೀಡಿದ್ದ. ಹಾಗೂ ರಾವಲ್ಪಿಂಡಿಯಲ್ಲಿರುವ ಜೈಷ್ ಎ ಮೊಹಮ್ಮದ್​ ಉಗ್ರ ಸಂಘಟನೆಯ ತರಬೇತಿ ಶಿಬಿರಕ್ಕೂ ಭೇಟಿ ನೀಡಿದ್ದ. ಈತನೊಂದಿಗೆ ಇನ್ನೂ ಮೂವರು ಉಗ್ರರು ಪಾಕಿಸ್ತಾನಕ್ಕೆ ತೆರಳಿದ್ದರು ಎಂದು ಎನ್​ಐಎನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)