ಉತ್ತರ ಪ್ರದೇಶ ವಕೀಲರ ಸಂಘದ ಮೊದಲ ಅಧ್ಯಕ್ಷೆಗೆ ಕೋರ್ಟ್​ ಆವರಣದಲ್ಲೇ ಗುಂಡಿಟ್ಟ ಸಹೋದ್ಯೋಗಿ

ಆಗ್ರಾ: ಉತ್ತರ ಪ್ರದೇಶ ವಕೀಲರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಎರಡು ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದ ದರ್ವೇಶ್​ ಯಾದವ್​ ಅವರನ್ನು ಅವರ ಸಹೋದ್ಯೋಗಿಯೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬಳಿಕ ತಾವೂ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ದರ್ವೇಶ್​ ಯಾದವ್​ ಆಗ್ರಾ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹತ್ಯೆಯಾದವರು. ಮನೀಶ್​ ಶರ್ಮ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದವ. ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ ದರ್ವೇಶ್​ ಮತ್ತು ಮನೀಶ್​ ನಡುವೆ ಹಿರಿಯ ವಕೀಲ ಅರವಿಂದ ಮಿಶ್ರಾ ಅವರ ಕೊಠಡಿಯಲ್ಲಿ ಬುಧವಾರ ಮಾತಿನ ಚಕಮಕಿ ಉಂಟಾಗಿತ್ತು. ಆನಂತರ ವಕೀಲರ ಸಂಘದ ಅಧ್ಯಕ್ಷೆಯಾಗಿದ್ದ ದರ್ವೇಶ್​ ಸನ್ಮಾನ ಸಮಾರಂಭಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾಗ ಆಕೆಯ ಮೇಲೆ ಮನೀಶ್​ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ.

ಮೂರು ಗುಂಡೇಟು ತಿಂದ ದರ್ವೇಶ್​ ಸ್ಥಳದಲ್ಲೇ ಕುಸಿದು ಬಿದ್ದರು. ಇದನ್ನು ಕಂಡ ಮನೀಶ್​ ಕೂಡ ತಮ್ಮ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ಆದರೆ, ಗಂಭೀರವಾಗಿ ಗಾಯಗೊಂಡು ಕುಸಿದರು. ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ದರ್ವೇಶ್​ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮನೀಶ್​ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಗ್ರಾದ ಹೆಚ್ಚುವರಿ ಎಸ್​ಪಿ ಪ್ರವೀರ್ಣ್ ವರ್ಮ ತಿಳಿಸಿದ್ದಾರೆ.

2004ರಲ್ಲಿ ಕಾನೂನು ಪದವಿ ವ್ಯಾಸಂಗ ಪೂರ್ಣಗೊಳಿಸಿದ್ದ ದರ್ವೇಶ್​ ವಕೀಲರ ವೃತ್ತಿ ಕೈಗೆತ್ತಿಕೊಂಡಿದ್ದರು. 2012ರಲ್ಲಿ ಮೊಲದ ಬಾರಿಗೆ ವಕೀಲರ ಸಂಘದ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2016ರಲ್ಲಿ ವಕೀಲರ ಸಂಘದ ಉಪಾಧ್ಯಕ್ಷೆಯಾಗಿ, 2017ರಲ್ಲಿ ಕಾರ್ಯಕಾರಿ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು. 2019ರ ಜೂನ್​ 10ರಂದು ಸಂಘದ ಮೊದಲ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಕಳೆದ ವರ್ಷ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಕೂಡ ಒಬ್ಬ ವಕೀಲರನ್ನು ಹತ್ಯೆ ಮಾಡಲಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *