VIDEO| ಹ್ಯಾಟ್ರಿಕ್​ ಸಿಕ್ಸರ್​ ಮೂಲಕ ಪಂದ್ಯ ನಿಷೇಧ ತೆರವಿಗೆ ಸಮರ್ಥನೆ ಕೊಟ್ಟ ಹಾರ್ದಿಕ್​ ಪಾಂಡ್ಯ

ವೆಲ್ಲಿಂಗ್ಟನ್​: ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡಿ ಕೆಲ ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದ ಟೀಂ ಇಂಡಿಯಾದ ಯುವ ಆಲ್​ ರೌಂಡರ್​ ಹಾರ್ದಿಕ್​ ಪಾಂಡ್ಯ, ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಸಾಮರ್ಥ್ಯ ಏನೆಂಬುದನ್ನು ನಿರೂಪಿಸಿದ್ದಾರೆ.

ಕಿವೀಸ್​ ವಿರುದ್ಧ ಭಾನುವಾರ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಜಯಭೇರಿ ಬಾರಿಸಿ, ಟೀಂ ಇಂಡಿಯಾ 4-1 ಅಂತರದಲ್ಲಿ ಏಕದಿನ ಸರಣಿ ಗೆದ್ದು ಏಕ್​​ ದಿನ್ ಕಾ ಸುಲ್ತಾನ್​ ಎನಿಸಿಕೊಂಡಿದೆ. ನಾಲ್ಕನೇ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಭಾರತಕ್ಕೆ ಐದನೇ ಪಂದ್ಯದಲ್ಲೂ ಅದೇ ಪರಿಸ್ಥಿತಿ ಎದುರಾಗಿತ್ತು.

ಮೊದಲು ಬ್ಯಾಟಿಂಗ್​ ಆರಂಭಿಸಿದ ಭಾರತ ಕೇವಲ 18 ರನ್​ಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಯುವ ಆಟಗಾರರಾದ ಹಾರ್ದಿಕ್​ ಪಾಂಡ್ಯ, ಅಂಬಾಟಿ ರಾಯುಡು, ವಿಜಯ್​ ಶಂಕರ್​ ಮತ್ತು ಕೇದರ್​ ಜಾಧವ್ ತಮ್ಮ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರಿಂದ​ ವಿಜಯಲಕ್ಷ್ಮಿ ಭಾರತದ ಕಡೆಗೆ ವಾಲಿದೆ.

ಮಹಿಳೆಯರ ಮೇಲಿನ ಅವಹೇಳನಕಾರಿ ಹೇಳಿಕೆಯಿಂದ ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿ ಬಿಸಿಸಿಐನಿಂದ ಪಂದ್ಯ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಹಾರ್ದಿಕ್​, ಐದನೇ ಪಂದ್ಯದಲ್ಲಿ ಕೇವಲ 22 ಎಸೆತಕ್ಕೆ 5 ಸಿಕ್ಸರ್​ ನೆರವಿನೊಂದಿಗೆ 45 ರನ್​ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಶೇಷ ಅಂದರೆ, ಕಿವೀಸ್​ ಬೌಲರ್​​ ಟೋಡ್​ ಆಸ್ಲೆ ಅವರು ಎಸೆದ 47ನೇ ಓವರ್​ನಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಬಾರಿಸುವ ಮೂಲಕ ನಿಷೇಧ ತೆರವುಗೊಳಿಸಿದ ಬಿಸಿಸಿಐಗೆ ಧನ್ಯವಾದ ತಿಳಿಸಿದರು. ಅಲ್ಲದೆ, ಸಿಕ್ಸರ್​ ಮೂಲಕ ತನ್ನ ಇರುವಿಕೆಗೆ ಸಮರ್ಥನೆ ನೀಡಿದರು. (ಏಜೆನ್ಸೀಸ್​)