ಚೀನಾದಲ್ಲಿ ಇಳಿಯಲು ಅನುಮತಿ ಇಲ್ಲದ್ದಕ್ಕೆ ಸ್ವದೇಶಕ್ಕೆ ಹಿಂದಿರುಗಿದ ನ್ಯೂಜಿಲೆಂಡ್​ ವಿಮಾನ

ಅಕ್ಲೆಂಡ್​: ಚೀನಾದ ಶಾಂಘೈಗೆ ಹೊರಟಿದ್ದ ಏರ್​ ನ್ಯೂಜಿಲೆಂಡ್​ ವಿಮಾನವು ಪಪುವಾ ನ್ಯೂ ಗಿನಿಯಾದ ಮೇಲೆ ಹಾರಾಡುತ್ತಿರುವಾಗಲೇ ಸ್ವದೇಶಕ್ಕೆ ಹಿಂದಿರುಗಿದೆ. ಚೀನಾದಲ್ಲಿ ಇಳಿಯಲು ಈ ವಿಮಾನಕ್ಕೆ ಅಗತ್ಯವಾದ ಅನುಮತಿಪತ್ರ ಇಲ್ಲದಿದ್ದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಏರ್​ ನ್ಯೂಜಿಲೆಂಡ್​ನ ಫ್ಲೈಟ್​ ಎನ್​ಜೆಡ್​289 ವಿಮಾನ 270 ಪ್ರಯಾಣಿಕರೊಂದಿಗೆ ಶನಿವಾರ ತಡರಾತ್ರಿ ಅಕ್ಲೆಂಡ್​ನಿಂದ ಚೀನಾದ ಶಾಂಘೈಗೆ ಪ್ರಯಾಣ ಬೆಳೆಸಿತ್ತು. ಪಪುವಾ ನ್ಯೂ ಗಿನಿಯಾ ವೈಮಾನಿಕ ಪ್ರದೇಶದಲ್ಲಿ ಸಾಗುತ್ತಿರುವಾಗ ಚೀನಾದಲ್ಲಿ ಇಳಿಯಲು ಅಗತ್ಯವಾದ ಅನುಮತಿಪತ್ರ ಇಲ್ಲ ಎಂಬುದು ಏರ್​ ನ್ಯೂಜಿಲೆಂಡ್​ನ ಪೈಲಟ್​ಗೆ ಅರಿವಾಗಿದೆ. ತಕ್ಷಣವೇ ಆತ ವಿಮಾನವನ್ನು ಮತ್ತೆ ಅಕ್ಲೆಂಡ್​ಗೆ ಕೊಂಡೊಯ್ಯುತ್ತಿರುವುದಾಗಿ ಘೋಷಿಸಿ, ಭಾನುವಾರ ಬೆಳಗ್ಗೆ 10 ಗಂಟೆಗೆ ಅಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾನೆ.

ಪೈಲಟ್​ನ ಈ ಕ್ರಮದ ಬಗ್ಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಪುವಾ ನ್ಯೂ ಗಿನಿಯಾದ ವೈಮಾನಿಕ ಪ್ರದೇಶದಲ್ಲಿ ತೆರಳುತ್ತಿದ್ದಾಗ ಚೀನಾದಲ್ಲಿ ಇಳಿಯಲು ಅನುಮತಿಪತ್ರ ಇಲ್ಲ ಎಂದು ಪೈಲಟ್​ಗೆ ಜ್ಞಾನೋದಯವಾಗುತ್ತೆ. ತಕ್ಷಣವೇ ವಿಮಾನ ಅಕ್ಲೆಂಡ್​ನತ್ತ ತಿರುಗುತ್ತೆ ಎಂದು ಹೇಳಿ, ಶಾಂಘೈನಿಂದ ಅಕ್ಲೆಂಡ್​ವರೆಗಿನ ನಕ್ಷೆಯನ್ನು ಅಳವಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಏರ್​ ನ್ಯೂಜಿಲೆಂಡ್​ನ ಅಧಿಕಾರಿಗಳು ಪ್ರಯಾಣಿಕರಿಗೆ ಅನನಕೂಲವಾಗಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಸ್ಥಳೀಯ ಕಾಲಮಾನದ ಪ್ರಕಾರ ಭಾನುವಾರ ಬೆಳಗ್ಗೆ 11 ಗಂಟೆಗೆ ಪರ್ಯಾಯ ವಿಮಾನದ ಮೂಲಕ ಪ್ರಯಾಣಿಕರನ್ನು ಶಾಂಘೈಗೆ ಕಳಿಸಿದ್ದಾಗಿ ಹೇಳಿದ್ದಾರೆ.