ಬೆಂಗಳೂರು: ಮತ್ತಿನ ಗಮ್ಮತ್ತಿನೊಂದಿಗೆ ರಾತ್ರಿ ಕಳೆದು ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿರುವ ಬೆಂಗಳೂರು ನಿವಾಸಿಗಳಿಗೆ ಅಬಕಾರಿ ಇಲಾಖೆ ಸಿಹಿ ಸುದ್ದಿ ನೀಡಿದೆ.
ಬಾರ್ ಮತ್ತು ರೆಸ್ಟೋರೆಂಟ್ (ಸಿಎಲ್ 9)ಗಳು ಬುಧವಾರ ನಸುಕಿನ ಒಂದರವರೆಗೆ ತೆರೆಯಲು ಇಲಾಖೆ ಅನುಮತಿ ನೀಡಿದ್ದರೆ, ಪೊಲೀಸ್ ಇಲಾಖೆ ಹೆಚ್ಚುವರಿ ಒಂದು ತಾಸು ಸೇರಿಸಿ ನಸುಕಿನ ಜಾವ ಎರಡರ ತನಕ ಕಾರ್ಯನಿರ್ವಹಿಸಲು ಅಸ್ತು ಎಂದಿದೆ.
ಅಬಕಾರಿ ಸಚಿವ ಎಚ್.ನಾಗೇಶ ಮಂಗಳವಾರ ಈ ವಿಷಯ ಸುದ್ದಿಗಾರರಿಗೆ ತಿಳಿಸಿದರು. ಆದರೆ, ಮದ್ಯದ ಅಂಗಡಿ (ಔಟ್ ಲೆಟ್)ಗಳಿಗೆ ಮಂಗಳವಾರ ರಾತ್ರಿ 11ರವರೆಗೆ ಮಾತ್ರ ವಹಿವಾಟಿಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾತ್ರಿ ಹೊತ್ತು ಮೇಲ್ಸೇತುವೆ (ಫ್ಲೈಓವರ್)ಗಳ ಮೇಲೆ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಿದ್ದು, ಹೊಸ ವರ್ಷ ಸಂಭ್ರಮಾಚರಣೆ ಬಳಿಕ ಫ್ಲೈಓವರ್ಗಳ ಮೇಲೆ ಅಪಘಾತಗಳು ಹೆಚ್ಚಾಗಿರುವುದನ್ನು ಗಮನಿಸಿ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರ ಸ್ವಾಗತಾರ್ಹ ಎಂದು ಸಚಿವ ನಾಗೇಶ್ ಹೇಳಿದರು.