ಹುಬ್ಬಳ್ಳಿ: ಹೊಸ ವರ್ಷಾಚರಣೆ ಪಾರ್ಟಿ ಬಳಿಕ ಕ್ಷುಲ್ಲಕ ಕಾರಣಕ್ಕೆ ಉಂಟಾದ ಗಲಾಟೆಯಲ್ಲಿ ಉತ್ತರ ಪ್ರದೇಶ ಮೂಲದ ನಾಲ್ವರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಬಂಕಾಪುರ ಚೌಕ ಬಳಿ ಬುಧವಾರ ನಸುಕಿನ ಜಾವ ನಡೆದಿದೆ.
ಉತ್ತರ ಪ್ರದೇಶ ಮೂಲದ ಅನಿಲ ಕುಮಾರ್ ಸಿಂಗ್ (20), ಆಶಾರಾಮ ಶಿವನಾರಾಯಣ (24), ವಿಜಯಲಾಲ ಕುಮಾರ (20), ಬೋಜಕುಮಾರ (20) ಗಾಯಗೊಂಡವರು. ಬಂಕಾಪುರ ಚೌಕ ಬಳಿಯ ನಾಂದಗೇರಕರ ಕಾಂಪೌಂಡ್ನ ಆರ್.ಕೆ. ಪ್ಲಾಸ್ಟಿಕ್ ಫ್ಯಾಕ್ಟರಿ ಯಲ್ಲಿ ಕೆಲಸಕ್ಕೆಂದು ಯುಪಿಯಿಂದ ಯುವಕರು ಬಂದಿದ್ದರು. ಫ್ಯಾಕ್ಟರಿ ಮೇಲಿನ ರೂಮಿನಲ್ಲಿ ವಾಸವಾಗಿದ್ದರು. ಹೊಸ ವರ್ಷಾಚರಣೆ ಪಾರ್ಟಿ ಮುಗಿಸಿ ತಡರಾತ್ರಿ 1.30ರ ಸುಮಾರಿಗೆ ಅನಿಲಕುಮಾರ್ ಸಿಂಗ್ ಹಾಗೂ ಸ್ನೇಹಿತರು ಮೂತ್ರ ವಿಸರ್ಜನೆಗೆಂದು ಕೆಳಗೆ ಬಂದಿದ್ದರು. ‘ಇಲ್ಲಿ ಆಫೀಸ್ ಇದೆ. ಮೂತ್ರ ವಿಸರ್ಜನೆ ಮಾಡಬೇಡಿ’ ಎಂದು ಅಲ್ಲೇ ಇದ್ದ ಕೆಲ ಯುವಕರು ತಾಕೀತು ಮಾಡಿದ್ದರು. ನಂತರ ಮಾತಿಗೆ ಮಾತು ಬೆಳೆದು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದರು. ಬಳಿಕ 8- 10 ಜನ ಸೇರಿ ಅನಿಲಕುಮಾರ್ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಸಬಾಪೇಟ ಠಾಣೆ ಪೊಲೀಸರು ಗಾಯಾಳುಗಳನ್ನು ಕಿಮ್ಸ್ಗೆ ದಾಖಲಿಸಿದರು. ಇಬ್ಬರ ತಲೆಗೆ ಗಂಭೀರ ಗಾಯಗಳಾಗಿದ್ದು, ಮತ್ತೊಬ್ಬನ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನ: ಪ್ರಕರಣ ದಾಖಲಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪೊಲೀಸರು 8 ಜನರನ್ನು ಬಂಧಿಸಿ ಐವರು ಅಪ್ರಾಪ್ತರನ್ನು ವಶಪಡಿಸಿಕೊಂಡಿದ್ದಾರೆ.