ಹೊಸ ವರ್ಷಾಚರಣೆ ಸಂಭ್ರಮ, ರಸ್ತೆಯಲ್ಲೇ ಕುಣಿತ, ಅಸಭ್ಯ ವರ್ತನೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಹೊಸ ವರ್ಷಾಚರಣೆ ಭರ್ಜರಿಯಾಗಿ ನಡೆಯಿತು.

ಸಾಯಂಕಾಲ ಆರಂಭಗೊಂಡ ಸಂಭ್ರಮಾಚರಣೆ ಮಧ್ಯರಾತ್ರಿ ವೇಳೆ ತೀವ್ರತೆ ಪಡೆಯಿತು. ಸಮಯ ರಾತ್ರಿ 12 ದಾಖಲಾಗಿ 2019ಕ್ಕೆ ಕಾಲಿಡುತ್ತಿದ್ದಂತೆ ಅಲ್ಲಲ್ಲಿ ಸುಡುಮದ್ದುಗಳ ಪ್ರದರ್ಶನ, ರಸ್ತೆಯಲ್ಲೇ ಕೇಕೆ ಸಹಿತ ನರ್ತನ ಕಂಡುಬಂತು. ಮದ್ಯದ ಅಮಲಿನಲ್ಲಿ ವೇಗವಾಗಿ ಬೈಕ್, ಕಾರು ಚಲಾಯಿಸಿ ಸಂಭ್ರಮಿಸುತ್ತಿದ್ದ ಯುವಕರನ್ನು ಹದ್ದುಬಸ್ತಿನಲ್ಲಿಡಲು ಪೊಲೀಸರು ಹರಸಾಹಸ ಪಡಬೇಕಾಯಿತು.

ನಗರದ ಹೋಟೆಲ್, ರೆಸ್ಟೋರೆಂಟ್, ಮಾಲ್‌ಗಳನ್ನು ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು. ಡಿಜೆ, ಸಂಗೀತ ರಸಮಂಜರಿ ಕಾರ್ಯಕ್ರಮ ಸಂಭ್ರಮದ ಕಳೆ ಹೆಚ್ಚಿಸಿದವು. ಹೋಟೆಲ್‌ಗಳಲ್ಲಿ ಸಾಯಂಕಾಲದಿಂದಲೇ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಕೆಲವರು ರೆಸ್ಟೋರೆಂಟ್‌ಗಳು ತಡರಾತ್ರಿವರೆಗೆ ತೆರೆದಿದ್ದವು. ಹೋಟೆಲ್‌ಗಳಲ್ಲಿ ಔತಣ ಕೂಟ, ಆಟೋಟ, ಮನರಂಜನಾ ಕಾರ್ಯಕ್ರಮ ನಡೆಯಿತು. ಕೆಲವು ವಸತಿ ಸಮುಚ್ಚಯಗಳು ಪಾರ್ಟಿ ಆಯೋಜನೆ ಮಾಡಿದ್ದವು. ಸಾರ್ವಜನಿಕ ಮತ್ತು ಖಾಸಗಿ ಮೈದಾನಗಳಲ್ಲೂ ಹೊಸ ವರ್ಷಾಚರಣೆಯ ಸಂಗೀತ ರಸಮಂಜರಿ, ಮನರಂಜನಾ ಕಾರ್ಯಕ್ರಮ ನಡೆಯಿತು. ನಗರದ ಜನತೆ ಮಧ್ಯರಾತ್ರಿ ಪರಸ್ಪರ ಶುಭಾಶಯ ಕೋರಿ, ಉಡುಗೊರೆ ನೀಡಿ ಸಂಭ್ರಮಿಸಿದರು.

ಅಸಭ್ಯ ವರ್ತನೆ: ಮದ್ಯದ ಅಮಲಿನಲ್ಲಿ ಯುವಕ, ಯುವತಿಯರು ರಸ್ತೆಯಲ್ಲೇ ಅಸಭ್ಯವಾಗಿ ವರ್ತಿಸುತ್ತಿದ್ದ ದೃಶ್ಯ ಕಂಡು ಬಂತು. ಯುವತಿಯರು ಕೂಡ ಕುಡಿದು ರಸ್ತೆಯಲ್ಲಿ ತೂರಾಡುತ್ತಿದ್ದರು. ಮದ್ಯದಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ನಗರದ ಹಂಪನಕಟ್ಟೆ, ಬಲ್ಮಠ, ಬಂಟ್ಸ್ ಹಾಸ್ಟೆಲ್, ಎಂ.ಜಿ.ರಸ್ತೆ ಸಹಿತ ಮುಖ್ಯ ರಸ್ತೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದರು. ಸಂಚಾರಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ ನಗರದ ಎಲ್ಲೆಡೆ ಚಾಲನೆಯಲ್ಲಿತ್ತು. ಮಹಿಳೆಯರಿಗೆ ಕೀಟಲೆ ತಡೆಯಲು ವಿಶೇಷ ಕಾರ್ಯಪಡೆ ತಂಡಗಳನ್ನು ರಚಿಸಲಾಗಿತ್ತು.

26 ಪ್ರಕರಣ ದಾಖಲು: ಹೊಸ ವರ್ಷ ಆಚರಣೆ ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರ ಕಮಿಷನರೆಟ್ ವ್ಯಾಪ್ತಿಯಲ್ಲಿ ಒಟ್ಟು 26 ಪ್ರಕರಣ ದಾಖಲಿಸಲಾಗಿದೆ. ಸೋಮವಾರ ರಾತ್ರಿ ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ನಾನಾ ಕಡೆ ನಾಕಾಬಂಧಿ ಹಾಕಲಾಗಿತ್ತು. ವರ್ಷಾಚರಣೆ ನಡೆಯುವ ಹೊಟೇಲ್‌ಗಳು, ಬೀಚ್‌ಗಳ ಸುತ್ತಮುತ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಮಧ್ಯರಾತ್ರಿ 12 ಗಂಟೆಯ ಬಳಿಕ ಪೊಲೀಸರು ತಪಾಸಣೆ ನಡೆಸಿದ್ದರು.